ರಾಮಮಂದಿರ ಉದ್ಘಾಟನೆಗೆ ಭಿನ್ನಾಭಿಪ್ರಾಯವಿಲ್ಲ
ಚಿಕ್ಕಮಗಳೂರು:
ಶಂಕರಾಚಾರ್ಯರ ನಾಲ್ಕು ಪೀಠಗಳಿಂದ ರಾಮಮಂದಿರ ಲೋಕಾರ್ಪಣೆಗೆ ವಿರೋಧ ವ್ಯಕ್ತವಾಗಿದೆ ಎಂಬ ವಿಚಾರಕ್ಕೆ ಹರಿಹರಪುರ ಮಠದ ಶ್ರೀ ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಜಿ ಸ್ಪಷ್ಟನೆ ನೀಡಿದ್ದಾರೆ. ಇದೇ ತಿಂಗಳ ೨೨ ರಂದು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯ ಇದೆ. ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಇದ್ದೇವೆ. ಶಂಕರ ಗುರುಪರಂಪರೆಯ ಮಠಗಳಿಗೆ ಅಸಮಾಧಾನವಿದೆ ಎಂಬ ವದಂತಿಗಳು ಕೇಳಿ ಬರುತ್ತಿವೆ. ಇದಕ್ಕೆ ನಾವು ಸ್ಪಷ್ಟನೆಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ಶಂಕರ ಗುರುಪರಂಪರೆಗೂ ಮತ್ತು ಅಯೋಧ್ಯೆ ರಾಮಮಂದಿರಕ್ಕೂ ಏನು ಸಂಬAಧ? ಇದನ್ನ ತಿಳಿದುಕೊಳ್ಳುವ ಮೊದಲು, ಭಗವಾನ್ ಶ್ರೀರಾಮನಿಗೂ ಶಂಕರ ಪರಂಪರೆಗೂ ಏನು ಸಂಬAಧ ಎಂದು ತಿಳಿದುಕೊಳ್ಳಬೇಕು. ಶಂಕರ ಗುರುಪರಂಪರೆಯ ಆದಿಪುರುಷರು ಶಂಕರರು. ಅದ್ವೈತ ಸಿದ್ದಾಂತದ ಮೂಲಕ ಪರಮಾತ್ಮನನ್ನು ತತ್ವ ರೂಪದಲ್ಲಿ ಆರಾಧಿಸುವ ಪದ್ಧತಿಯನ್ನು ಜಗತ್ತಿಗೆ ತಿಳಿಸಿದ್ದಾರೆ. ಹರಿಹರ ಪರಬ್ರಹ್ಮನ ಅತ್ಯಂತ ಸಮಾನವಾದ ರೂಪಗಳು. ಹರಿಹರನನ್ನ ಶ್ರದ್ಧಾ ಭಕ್ತಿಯಯಿಂದ ಆರಾಧಿಸುವ ಪರಂಪರೆ ಶಂಕರ ಪರಂಪರೆ ಎಂದರು.
ಹರಿ ಅಂದರೇ ಮಹಾವಿಷ್ಣು, ವಿಷ್ಣುವಿನ 7ನೇ ಅವತಾರವೇ ಶ್ರೀರಾಮ. ಶಂಕರರು ಶ್ರೀ ರಾಮನ ಪರಮ ಭಕ್ತರಾಗಿದ್ದರು. ಶಂಕರರು ರಾಮನ ಬಗ್ಗೆ ಸ್ತೋತ್ರಗಳನ್ನ ರಚಿಸಿ ಶ್ರೀರಾಮನಿಗೆ ಸಮರ್ಪಣೆ ಮಾಡಿದ್ದಾರೆ. ಶಂಕರರು ಸ್ಥಾಪಿಸಿದ ಪೀಠಗಳಲ್ಲಿ ಶ್ರೀರಾಮನನ್ನು ನಿರಂತರವಾಗಿ ಆರಾಧಿಸುವಂತೆ ಆದೇಶಿಸಿದ್ದಾರೆ. ಶಂಕರ ಪರಂಪರೆಯ ಎಲ್ಲಾ ಮಠಗಳು ಶ್ರೀರಾಮನನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಶ್ರೀರಾಮ ಮಂದಿರ ಅನ್ನೋದು ಎಲ್ಲಾ ಮಠಗಳಲ್ಲೂ ಇದೆ ಎಂದು ತಿಳಿಸಿದರು.
ಶ್ರೀರಾಮ ಭಾರತೀಯ ಸಂಸ್ಕೃತಿಗೆ ಸೇರಿದ ದೇವರು. ನಮ್ಮ ದೇಶದ ಹೆಗ್ಗುರುತು ಭಗವಾನ್ ಶ್ರೀ ರಾಮ. ಈ ಪವಿತ್ರ ದೇಶದ ಅಸ್ಮಿತೆ. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರ ಹುಟ್ಟಿದ್ದಾನೆ. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ದೇವಾಲಯ ಇತ್ತು. ಆದರೆ, ವಿದೇಶಿ ಆಕ್ರಮಣಕಾರರಿಂದ ನಾಶವಾಗಿತ್ತು. ಭಾರತೀಯರ 500 ವರ್ಷಗಳ ಹೋರಾಟದ ಫಲವಾಗಿ ಮಂದಿರ ನಿರ್ಮಾಣವಾಗುತ್ತಿದೆ. ಇದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ. ಶ್ರೀರಾಮನ ಲೋಕಾರ್ಪಣೆ ಎಂಬುದು ಸಮಸ್ತ ಭಾರತೀಯರ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಶ್ರೀರಾಮನ ಲೋಕಾರ್ಪಣೆ ವಿಚಾರ ಸಮಸ್ತ, ಮತ, ಧರ್ಮ ಜಾತಿ, ಮತ, ಪಂಥ, ಸಿದ್ಧಾಂತ ಎಲ್ಲರಲ್ಲೂ ಸಂತೋಷ ಮೂಡಿಸಿದೆ. ಗುರು ಪರಂಪರೆಗೂ ಅಸಮಾಧಾನವಿಲ್ಲ, ವಿಶೇಷವಾಗಿ ಶಂಕರ ಗುರು ಪರಂಪರೆಯ ಮಠಗಳಿಗೆ ಕಿಂಚಿತ್ತೂ ಭಿನ್ನಾಭಿಪ್ರಾಯವಿಲ್ಲ. ಒಂದು ವೇಳೆ ಯಾರಾದರೂ ಭಿನ್ನಾಭಿಪ್ರಾಯ ತಿಳಿಸಿದರೆ ಕೇವಲ ಅವರ ವೈಯುಕ್ತಿಕ ಅಭಿಪ್ರಾಯವಾಗಿರುತ್ತದೆ ಎಂದು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠಂ, ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಸ್ಪಷ್ಟಪಡಿಸಿದರು.









































































































































































































































































































































































































































































































































































































































































































































































































































































































































































































































































































































