ದೆಹಲಿಯತ್ತ ಮಾಜಿ ಸಿಎಂ ಪ್ರಯಾಣ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆ ಮತ್ತು ವಿರೋಧ ಪಕ್ಷದ ನಾಯಕ ನೇಮಕ ವಿಳಂಬವಾಗಿದೆ. ಈ ತಿಂಗಳ ಅಂತ್ಯದೊಳಗೆ ಇದಕ್ಕೆ ಮುಕ್ತಿ ಸಿಗುವುದೋ ಅಥವಾ ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೆ ಕಾಯಬೇಕೇ ಎಂಬುದು ಕುತೂಹಲಕರವಾಗಿದೆ. ಇದರ ನಡುವೆ ಪಕ್ಷದ ವಿರುದ್ಧವೇ ಅಸಮಾಧಾನಗೊಂಡಿರುವ ಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಹಿನ್ನೆಲೆ ಇಂದು ಸದಾನಂದಗೌಡರು , ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ತೆರಳಲಿದ್ದಾರೆ.
ಪಕ್ಷದ ವಿದ್ಯಮಾನಗಳ ಕುರಿತಂತೆ ಚರ್ಚಿಸಲು ತಮ್ಮನ್ನು ಭೇಟಿ ಆಗುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ನೀಡಿದ್ದು, ದೆಹಲಿಗೆ ಹೋಗಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರ ಹೆಸರು ಕೇಳಿ ಬರುತ್ತಿವೆ.
ಶೀಘ್ರದಲ್ಲಿ ಶೋಭಾ ಕರಂದ್ಲಾಜೆ ಹೆಸರು ಘೋಷಣೆ!
ಕೆಲವೇ ದಿನಗಳಲ್ಲಿ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಲಿದೆ ಎನ್ನಲಾಗುತ್ತಿದೆ. ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷರಾದರೆ ಮೊದಲ ಬಾರಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಹಿಳೆಯೊಬ್ಬರು ಅಧಿಕಾರ ವಹಿಸಿಕೊಂಡಂತಾಗುತ್ತದೆ.
ರಾಜ್ಯಾಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಹೈಕಮಾಂಡ್ ಈಗಾಗಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯದ ಪ್ರಮುಖ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದು, ಶೀಘ್ರದಲ್ಲೇ ಘೋಷಣೆ ಮಾಡಲಿದೆ.
ತೆರೆಮರೆಯಲ್ಲೇ ನಡೆದಿದ್ಯಾ ಪಟ್ಟಾಭಿಷೇಕಕ್ಕೆ ಸಿದ್ಧತೆ?
ರಾಜ್ಯ ಬಿಜೆಪಿ ಸಾರಥಿ ಇಲ್ಲದ ರಥದಂತಾಗಿದೆ. ಎಲೆಕ್ಷನ್ ಆದ್ಮೇಲೆ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಆಗ್ಬೇಕಿದೆ. ಆದರೆ ಯಾರಾಗ್ತಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಈ ನಡುವೆ ಶೋಭಾ ಕರಂದ್ಲಾಜೆಗೇ ರಾಜ್ಯ ಬಿಜೆಪಿ ಆಧ್ಯಕ್ಷೆ ಸ್ಥಾನಕ್ಕೇರಿಸೋ ಎಲ್ಲ ಲಕ್ಷಣಗಳೂ ಕಾಣಿಸ್ತಿವೆ. ನಿನ್ನೆ ಸ್ವತಃ ಅಮಿತ್ ಶಾ ಅವರೇ ಶೋಭಾ ಕರಂದ್ಲಾಜೆ ಜೊತೆ ಫೋನ್ ಮೂಲಕ ಮಾತಾಡಿದ್ದಾರೆ.
ಶೋಭಾ ಕರಂದ್ಲಾಜೆ ಜನ್ಮದಿನದ ಹಿನ್ನೆಲೆ ಕರೆ ಮಾಡಿ ಶುಭ ಕೋರಿದ್ದ ಅಮಿತ್ ಶಾ, ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆಯೂ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಶೋಭಾ ಕರಂದ್ಲಾಜೆ ಮಾತ್ರ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ನಾನು ಕೇಂದ್ರ ಸಚಿವೆಯಾಗಿಯೇ ಖುಷಿಯಾಗಿದ್ದೀನಿ, ರಾಜ್ಯಾಧ್ಯಕ್ಷರ ಸ್ಥಾನದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.








































































































































































































































































































































































































































































































































































































































































































































































































































































































































































































































































































































