July 28, 2026
#ಬೆಂಗಳೂರು

ಶೇಂಗಾ, ಸೋಯಾಬೀನ್ ಬೆಳೆಗಾರರಿಗೆಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಕ್ರಮ

ಬೆಂಗಳೂರು:
ಧಾರವಾಡ ಜಿಲ್ಲೆಯಲ್ಲಿ ಶೇಂಗಾ ಮತ್ತು ಸೋಯಾಬಿನ್ ಬೆಳೆಗಳಿಗೂ ಮಧ್ಯಂತರ ಬೆಳೆ ವಿಮೆ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಂಸದೀಯ ಸಚಿವ ಜೋಶಿ ಅವರು ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಡಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?
ಬೆಳೆ ಹಾನಿ ಸಮೀಕ್ಷೆಗೂ ಮೊದಲೇ ಶೇಂಗಾ ಹಾಗೂ ಸೋಯಾಬಿನ್ ಬೆಳೆ ಕಟಾವು ಆಗಿದ್ದರಿಂದ ಈ ಎರಡೂ ಬೆಳೆಗಳನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮಧ್ಯಂತರ ಪರಿಹಾರ ಪ್ರಕ್ರಿಯೆಯಿಂದ ವಿಮಾ ಕಂಪನಿ ಕೈ ಬಿಟ್ಟಿತ್ತು.
ಧಾರವಾಡ ಜಿಲ್ಲಾಡಳಿತ ಮಧ್ಯಂತರ ಬೆಳೆ ವಿಮೆ ಪರಿಹಾರಕ್ಕೆ ಸಲ್ಲಿಸಿದ ರಿಪೋರ್ಟ್ ನಲ್ಲಿ ಸೋಯಾಬಿನ್ ಮತ್ತು ಶೇಂಗಾ ಬೆಳೆಗಳನ್ನ ಹೊರತುಪಡಿಸಿ ಮಿಕ್ಕ ಎಲ್ಲಾ ಬೆಳೆಗಳನ್ನು ಎಸ್‌ಬಿಐ ವಿಮೆ ಕಂಪನಿ ಅಂಗೀಕರಿಸಿ ಮಧ್ಯಂತರ ವಿಮೆ ಹಣ ಬಿಡುಗಡೆ ಮಾಡಿತ್ತು.
ಈ ವಿಚಾರ ಗಮನಕ್ಕೆ ಬರುತ್ತಲೇ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ವಿಮೆ ಕಂಪನಿಯನ್ನು ಸಂಪರ್ಕಿಸಿ, ಸಭೆ ನಡೆಸಿ ಮುಂಗಾರಿನ ಶೇಂಗಾ ಮತ್ತು ಸೋಯಾಬೀನ್ ಬೆಳೆಗಳಿಗೂ ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಈ ಬೆಳೆಗಾರರ ಸಮಸ್ಯೆ ಅರಿತು ಕೇಂದ್ರ ಕೃಷಿ ಸಚಿವ ಅರ್ಜುನ್ ಅವರೊಂದಿಗೂ ಚರ್ಚೆ ನಡೆಸಿ, ಫಸಲ್ ಬಿಮಾ ಸಿಇಓ ರಿತೇಶ್ ಚೌಹಾನ್ ಮತ್ತು ಎಸ್‌ಬಿಐ ವಿಮೆ ಕಂಪನಿಯ ರಾಷ್ಟ್ರೀಯ ಮುಖ್ಯಸ್ಥ ಪಿಯೂಷ್ ಸಿಂಗ್ ಅವರ ಗಮನ ಸೆಳೆದು ಶೇಂಗಾ, ಸೋಯಾಬೀನ್ ಬೆಳೆ ಗಾರರಿಗೂ ಮಧ್ಯಂತರ ಬೆಳೆ ವಿಮೆ ಪರಿಹಾರ ಕೈ ಸೇರುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜೋಶಿ ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ಶೇಂಗಾ ಹಾಗೂ ಸೋಯಾಬೀನ್ ಬೆಳೆಗಳಿಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮಧ್ಯಂತರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಅತಿ ಶೀಘ್ರದಲ್ಲಿ ಪತ್ರ ತಲುಪಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a comment

Your email address will not be published. Required fields are marked *