‘70 MLA ಬೆಂಬಲ ಇದೆ’; ಡಿಸಿಎಂ ಡಿಕೆಶಿ ಪರ ಶಿವಗಂಗಾ ಬ್ಯಾಟಿಂಗ್!
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇದು ಡಬಲ್ ಸ್ಟೇರಿಂಗ್ ಸರ್ಕಾರ ಅಂತ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಸದ್ಯ ಕಾಂಗ್ರೆಸ್ ನಲ್ಲಿ ಆಗ್ತಾ ಇರೋ ಬೆಳವಣಿಗೆ ಗಮನಿಸಿದರೆ ಮನೆಯೊಂದು ಮೂರು ಬಾಗಿಲು ಅನ್ನೋದು ಗೊತ್ತಾಗ್ತಾ ಇದೆ. ಪಕ್ಷ ಅಧಿಕಾರಕ್ಕೆ ಬಂದು 6 ತಿಂಗಳು ಕಳೆಯುವ ವೇಳೆಗೆ ನೂತನ ಸಿಎಂ ಪರ ವಿರೋಧ ಚರ್ಚೆ ಆರಂಭವಾಗಿದೆ. ಇದು ಸಿಎಂ ಹಾಗೂ ಡಿಸಿಎಂಗೆ ಇರುಸು ಮುರುಸು ಸೃಷ್ಟಿಸಿದೆ.
ಕಾಂಗ್ರೆಸ್‌ನಲ್ಲಿ ಬುಸುಗುಟ್ಟಿದ ಬಣ ರಾಜಕೀಯ!
ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಬಣ, ಡಿಕೆ ಶಿವಕುಮಾರ್ ಬಣ ಇದೆ ಅಂತ ವಿರೋಧ ಪಕ್ಷಗಳ ಟೀಕಾ ಪ್ರಹಾರದ ಮಧ್ಯೆ ನಡೆಯುತ್ತಿರುವ ಬೆಳವಣಿಗೆಗಳು ಪೂರಕವಾಗಿವೆ. ಸರ್ಕಾರ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಬಣದ ಹಿರಿಯ ಸಚಿವರು ಸಿದ್ದರಾಮಯ್ಯ 5 ವರ್ಷ ಪೂರ್ಣಪ್ರಮಾಣದ ಸಿಎಂ ಆಗಿರ್ತಾರೆ ಅನ್ನೋ ಹೇಳಿಕೆಗಳಿಂದ ಶುರುವಾದ ಟಾಕ್ ವಾರ್ 50:50 ಸಿಎಂ ಅನ್ನೋ ಮಟ್ಟಕ್ಕೆ ಬಂದು ನಿಂತಿದೆ.
ಈ ಮಧ್ಯೆ ಬಣ ರಾಜಕೀಯ ಮತ್ತಷ್ಟು ತೀವ್ರವಾದಂತಿದೆ. ಅನೇಕ ಹಿರಿಯರು ಗೆದ್ದಿದ್ದರೂ ಮಂತ್ರಿಗಳಾಗಿಲ್ಲ. ಅಂತವರಿಗೆ ಅವಕಾಶ ಕೊಡಬೇಕು ಅಂತ ಕಾಂಗ್ರೆಸ್‌ನ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೇಳಿಕೆ ಬೆನ್ನಲ್ಲೇ ಇದೀಗ, ಡಿಕೆಶಿ ಸಿಎಂ ಆಗಲು ನಮ್ಮ ಬೆಂಬಲ ಇದೆ ಅಂತ ಶಾಸಕರು ನೇರಾ ನೇರಾ ಬ್ಯಾಟ್ ಬೀಸೋದಕ್ಕೆ ಶುರುಮಾಡಿದ್ದಾರೆ. ಅಷ್ಟೇ ಅಲ್ಲ ಶಕ್ತಿ, ಸಾಮರ್ಥ್ಯ, ನಂಬರ್‌ಗಳ ಮಾತುಗಳನ್ನಾಡ್ತಿದ್ದಾರೆ.
‘ಡಿ.ಕೆ. ಶಿವಕುಮಾರ್‌ಗೆ 70 ಶಾಸಕರ ಬೆಂಬಲ ಇದೆ’!
ಡಿಕೆ ಶಿವಕುಮಾರ್ ಗೆ 70 ಜನ ಶಾಸಕರ ಬೆಂಬಲ ಇದೆ, ಅವರಿಗೆ ಯಾವ ಸ್ಥಾನಕ್ಕಾದ್ರೂ ಸರಿ ನಮ್ಮ ಬೆಂಬಲ ಇದೆ ಅಂತ ಮೊದಲ ಬಾರಿಗೆ ಶಾಸಕ ಆಗಿರುವ ಚನ್ನಗಿರಿಯ ಬಸವರಾಜ್ ಶಿವಗಂಗಾ ಹೇಳಿದ್ದಾರೆ. ಈ ಮಾತು ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಸ್ಟಿ ಮಾಡಿದೆ.
ಇತ್ತೀಚೆಗೆ ಆಳಂದ ಶಾಸಕರ ಬಿ.ಆರ್ ಪಾಟೀಲ್, ಸಿದ್ದರಾಮಯ್ಯ ಅವರೇ 5 ವರ್ಷಸಿಎಂ ಆಗಿರುತ್ತಾರೆ ಅನ್ನೋ ಮೂಲಕ ಡಿಕೆಶಿ ಬಣದ ಕಣ್ಣು ಕೆಂಪಗಾಗುವಂತೆ ಮಾಡಿದ್ರು. ಇವೆಲ್ಲದರ ನಡುವೆ ಕಾಂಗ್ರೆಸ್ ಹಿರಿಯ ಶಾಸಕ ಅಶೋಕ್ ಪಟ್ಟಣ್ 2 ವರೆ ವರ್ಷದ ಬಳಿಕ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ ಆಗುತ್ತೆ. ನಾನು ಮಂತ್ರಿ ಆಗುತ್ತೇನೆ ಅನ್ನೋ ಮೂಲಕ ಸಿಎಂ ಕೂಡ ಬದಲಾವಣೆ ಆಗ್ತಾರಾ ಅನ್ನೋ ಪ್ರಶ್ನೆ ಹುಟ್ಟುಹಾಕಿದ್ದಾರೆ. ಇನ್ನು ಶಾಸಕರ ಹೇಳಿಕೆಗಳನ್ನ ಸೀರಿಯಸ್ ಆಗಿ ತೆಗೆದುಕೊಂಡ ಡಿಸಿಎಂ ಡಿಕೆಶಿ ಶಾಸಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಅಶೋಕ್ ಪಟ್ಟಣ್ ಹೇಳಿರೋದ್ರಲ್ಲಿ ತಪ್ಪೇನಿದೆ
ಈ ಮಧ್ಯೆ ತೇಪೆ ಹಚ್ಚಲು ಪ್ರಯತ್ನಿಸಿರೋ ಕಾಂಗ್ರೆಸ್‌ನ ಇತರೆ ಶಾಸಕರು, ನಮ್ಮ ಪಕ್ಷದಲ್ಲಿ ಅಂಥದ್ದೇನು ಇಲ್ಲ. ಅಂತಿದ್ರೆ ಎರಡೂವರೆ ವರ್ಷ ಅಂತ ಅಶೋಕ್ ಪಟ್ಟಣ್ ಹೇಳಿರೋದ್ರಲ್ಲಿ ತಪ್ಪೇನಿದೆ ಅಂತ ಮತ್ತೋರ್ವ ರೆಬೆಲ್ ಮನಸ್ಥಿತಿ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಒಟ್ಟಾರೆ, ಈ ಎಲ್ಲಾ ಬೆಳವಣಿಗೆಗಳನ್ನ ನೋಡ್ತಿದ್ರೆ, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಗೊತ್ತಾಗ್ತಿದೆ. ಮುಂದೆ ಈ ಮಾತುಗಳು ಯಾವೆಲ್ಲಾ ಸ್ವರೂಪಕ್ಕೆ ತಿರುಗುತ್ತೋ ಕಾದು ನೋಡಬೇಕು.








































































































































































































































































































































































































































































































































































































































































































































































































































































































































































































































































































































