October 30, 2026
#ಜಿಲ್ಲೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹೋತ್ಸವ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಅತಿದೊಡ್ಡ ಉತ್ಸವ ಎಂದರೆ ಅದು ಚಂಪಾಷಷ್ಠಿ ಮಹೋತ್ಸವ. ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹೋತ್ಸವ ನಡೆದಿದ್ದು, ಸುಬ್ರಹ್ಮಣ್ಯ ದೇವರ ಬ್ರಹ್ಮ ರಥೋತ್ಸವ ಸಂಪನ್ನಗೊಂಡಿದೆ.

ಧನು ಲಗ್ನ ಮುಹೂರ್ತದಲ್ಲಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಸುಬ್ರಹ್ಮಣ್ಯ ದೇವರ ಬ್ರಹ್ಮ ರಥೋತ್ಸವ ಕಣ್ತುಂಬಿಕೊಳ್ಳುವ ಸಲುವಾಗಿ ಭಕ್ತ ಸಾಗರ ಆಗಮಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ದೊಡ್ಡ ಉತ್ಸವ ಇದಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್ 10 ರಿಂದ ಕುಕ್ಕೆ ಚಂಪಾಷಷ್ಠಿ ಮಹೋತ್ಸವ ಆರಂಭಗೊಂಡಿದೆ. ದೇವರು ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಿದೆ. ಈಗಾಗಲೇ ಭಕ್ತರು ಕುಕ್ಕೆಗೆ ಆಗಮಿಸುತ್ತಿದ್ದಾರೆ. 

ಚಂಪಾಷಷ್ಠಿ ಭಾಗವಾಗಿ ಪ್ರಮುಖವಾಗಿ ನಡೆಯುವುದು ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ. ಡಿ.17ರಂದು ಪಂಚಮಿ ರಥೋತ್ಸವ ಡಿ.18 ರಂದು ಬೆಳಗ್ಗೆ ಚಂಪಾಷಷ್ಠಿ ಬ್ರಹ್ಮರಥೋತ್ಸವ, ಡಿ.19 ರಂದು ಅವಭ್ರಥೋತ್ಸವ ಮತ್ತು ನೌಕವಿಹಾರ, ಡಿ.24 ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೆ ಸಮಾಪನಗೊಳ್ಳಲಿದೆ. ಅಂದು ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ನೆರವೇರಲಿದೆ. ಹಾಗೂ ಪುರುಷರಾಯ, ಹೊಸಳಿಗಮ್ಮ ಹಾಗೂ ಪರಿವಾರ ದೈವಗಳ ನಡಾವಳಿ ನಡೆಯಲಿವೆ. 

ಕುಕ್ಕೆ ಸುಬ್ರಮಣ್ಯ ದೇವರನ್ನು ಬೆಳಕಿಗೆ ತಂದಂತಹ ಪ್ರತೀತಿ ಇರುವ ಮಲೆಕುಡಿಯ ಆದಿವಾಸಿ ಜನಾಂಗದವರು ಚಂಪಾಷಷ್ಠಿ ವೇಳೆಯಲ್ಲಿ ವಿಶಿಷ್ಟವಾಗಿ ಬೆತ್ತದಿಂದ ಬ್ರಹ್ಮರಥವನ್ನು ನಿರ್ಮಿಸುವುದು ಪಾರಂಪರಿಕ ವಾಡಿಕೆಯಾಗಿದೆ. ಬೃಹತ್ ಬ್ರಹ್ಮರಥವನ್ನು ಪ್ರತ್ಯೇಕವಾಗಿ ಹಗ್ಗಗಳ ಬಳಕೆ ಇಲ್ಲದೆ ಬರೀ ಬಿದಿರು ಮತ್ತು ಬೆತ್ತದಲ್ಲಿ ಕೌಶಲ್ಯಕರವಾಗಿ ನಿರ್ಮಿಸುವುದು ಇದರ ವಿಶಿಷ್ಟತೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಮಹೋತ್ಸವ, ರಥೋತ್ಸವವೇ ಆಕರ್ಷಣೆ. ಈ ವೇಳೆ ಸರ್ಪ ಸಂಸ್ಕಾರ ಸಹಿತ ಯಾವುದೇ ಸೇವೆಗಳು ಇರುವುದಿಲ್ಲ. ರಥೋತ್ಸವಕ್ಕೆಂದೇ ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಮಾರ್ಗಶಿರ ಮಾಸದಲ್ಲಿ ಬರುವ ಷಷ್ಠಿಯೇ ಸುಬ್ರಹ್ಮಣ್ಯ ಷಷ್ಠಿ. ಕರಾವಳಿಗರಿಗೆ ಇದೊಂದು ವಿಶೇಷ ಹಬ್ಬವೂ ಹೌದು. ಶಿವ ಹಾಗೂ ಪಾರ್ವತಿಯರ ಮಗನಾದ ಕಾರ್ತಿಕೇಯನು ಕುಮಾರಧಾರ ತಟದಲ್ಲಿ ನೆಲೆಯಾದ ಸ್ಥಳ ಕುಕ್ಕೆ ಸುಬ್ರಹ್ಮಣ್ಯ. ಈ ಸುಬ್ರಹ್ಮಣ್ಯ ಷಷ್ಠಿಯ ಹಿಂದೆಯೂ ಒಂದು ಪೌರಾಣಿಕ ಹಿನ್ನೆಲೆ ಇದೆ. ಸ್ಕಂದ ಷಷ್ಠಿ ನಂತರ ಬರುವ ಆಚರಣೆಯೇ ಸುಬ್ರಹ್ಮಣ್ಯ ಷಷ್ಠಿ. ಮಾರ್ಗಶಿರ ಮಾಸದಲ್ಲಿ ಬರುವ ಈ ಷಷ್ಠಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಎಂದೂ ಪ್ರಸಿದ್ಧಿಯನ್ನು ಪಡೆದಿದೆ. ಶುಕ್ಲಪಕ್ಷದ ಆರನೇ ದಿನ ಆಚರಿಸಲ್ಪಡುವ ಷಷ್ಠಿ ಹಿಂದೂಗಳ ಪ್ರಮುಖ ಹಬ್ಬ. ತುಳುನಾಡಿಗೆ ಇದು ಪ್ರಮುಖ ಹಬ್ಬವೂ ಹೌದು.

Leave a comment

Your email address will not be published. Required fields are marked *