ಹೊಸವರ್ಷ ಆಚರಣೆ – ಮಹಿಳೆಯರ ರಕ್ಷಣೆಗೆ ಮುಂದಿನ ವಾರದಲ್ಲಿ ಗೈಡ್‌ಲೈನ್ಸ್
ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಯಾವುದೇ ತೊಂದರೆ ಮತ್ತು ಕಿರುಕುಳ ಆಗದಂತೆ ನೋಡಿಕೊಳ್ಳಲು ವಿಶೇಷ ಗೈಡ್‌ಲೈನ್ಸ್ ಬಿಡುಗಡೆ ಮಾಡುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ವರ್ಷಾಚರಣೆ ವೇಳೆ ಮಹಿಳೆಯರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದಿನ ವಾರದಲ್ಲೇ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಹೊಸ ವರ್ಷ ಸಂಭ್ರಮಾಚರಣೆ ಬಗ್ಗೆ ಬಿಬಿಎಂಪಿ, ಬೆಸ್ಕಾಂ, ಬಿಎಂಟಿಸಿ, ಮೆಟ್ರೋ ಹಾಗೂ ಅಬಕಾರಿ ಇಲಾಖೆಗಳ ಜೊತೆ ಎರಡು ಸುತ್ತಿನ ಸಭೆ ನಡೆಸಿ ಚರ್ಚಿಸಲಾಗಿದೆ. ಎಂ.ಜಿ ರಸ್ತೆ, ಬ್ರಿಗೆಡ್ ರೋಡ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ತೊಂದರೆ ಆಗದಂತೆ, ಕುಡಿದು ಅತಿರೇಕವಾಗಿ ವರ್ತಿಸಿದ್ರೆ ಹಾಗೂ ಇತರೆ ದುರ್ಘಟನೆಗಳನ್ನ ತಡೆಗಟ್ಟಲು ಈ ಹಿಂದಿನ ಪ್ರಕರಣಗಳನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಠಾಣೆ ವಿವರ ಪಡೆಯಲು QR ಕೋಡ್:
ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಕ್ಯೂಆರ್‌ಕೋಡ್ ಅಳವಡಿಸುವ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗುತ್ತಿದೆ. ಹೊಸ ವರ್ಷದ ಹೊರತಾಗಿಯೂ ಸಾರ್ವಜನಿಕ ಸ್ಥಳಗಳಲ್ಲಿ ದುರ್ಘಟನೆಗಳು ಸಂಭವಿಸಿದಾಗ ಸ್ಥಳ ಯಾವ ಠಾಣೆ ವ್ಯಾಪ್ತಿಗೆ ಬರಲಿದೆ? ಯಾರನ್ನು ಸಂಪರ್ಕಿಸಬೇಕು? ಇನ್ನೂ ಮುಂತಾದ ಗೊಂದಲಗಳಿದ್ದರೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು ಎಂದು ವಿವರಿಸಿದ್ದಾರೆ.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಸಂಪೂರ್ಣ ವಿವರ ಸಿಗಲಿದೆ. ಇದರಿಂದ ಸಾರ್ವಜನಿಕರು ನೀಡುವ ಮಾಹಿತಿ ಆಧರಿಸಿ ಪೊಲೀಸರು ಘಟನಾ ಸ್ಥಳಕ್ಕೆ ಬರಲು ಅನುಕೂಲವಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.








































































































































































































































































































































































































































































































































































































































































































































































































































































































































































































































































































































