ಭದ್ರಾ ಬಲದಂಡೆ , ಎಡದಂಡೆ ನಾಲೆಗಳಿಗೆ ನೀರು ಬಿಡುಗಡೆ
ದಾವಣಗೆರೆ: 2023-24 ನೇ ಸಾಲಿನಲ್ಲಿ ಶಿವಮೊಗ್ಗ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರನ್ನು ಸರದಿಯನ್ವಯ ಹರಿಸಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ ಅವರು ತಿಳಿಸಿದ್ದಾರೆ. ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 15 ರವರೆಗೆ ಒಟ್ಟು 20 ದಿನಗಳು ಹಾಗೂ ಅಕ್ಟೋಬರ್ 26 ರಿಂದ ನವೆಂಬರ್ 17 ರವರೆಗೆ ಒಟ್ಟು 23 ದಿನಗಳು ನೀರನ್ನು ಹರಿಸಲಾಗುವುದು ಎಂದಿದ್ದಾರೆ.
ಭದ್ರಾ ಎಡದಂಡೆ ನಾಲೆಗಳಿಗೆ ಈಗಾಗಲೇ ನೀರನ್ನು ಹರಿಸಲಾಗಿದ್ದು, ಅಕ್ಟೋಬರ್ 1 ರವರೆಗೆ ಒಟ್ಟು 15 ದಿನಗಳು ನೀರನ್ನು ಹರಿಸಲಾಗುತ್ತದೆ. ನಂತರ ಅಕ್ಟೋಬರ್ 12 ರಿಂದ 26 ರವರೆಗೆ ಒಟ್ಟು 15 ದಿನಗಳು ಹಾಗೂ ನವೆಂಬರ್ 6 ರಿಂದ 17 ರವರೆಗೆ ಒಟ್ಟು 12 ದಿನಗಳು ನೀರನ್ನು ಹರಿಸಲಾಗುದು ಎಂದು ಅವರು ತಿಳಿಸಿದ್ದಾರೆ.
ಹೌದು, ಭದ್ರಾ ಜಲಾಶಯದಿಂದ ಬೆಳೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೇ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದರು. ಕೂಡಲೇ ಪೊಲೀಸರು ರೈತನ ಕೈಯಿಂದ ಕ್ರಿಮಿನಾಶಕದ ಬಾಟಲ್ ಕಸಿದುಕೊಂಡಿದ್ದರು. ಬಳಿಕ ರೈತರ ಪ್ರತಿಭಟನೆಯಿಂದ ಎಚ್ಚೆತ್ತ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರು ಭದ್ರಾ ನೀರಿನ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿ, ‘ಇನ್ನೇರಡು ದಿನಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ದಾವಣಗೆರೆ ಜಿಲ್ಲೆಗೆ ಭದ್ರಾ ನೀರು ಬರುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದರು.
ಇನ್ನು ಇದೇ ಆಗಸ್ಟ್ 10 ರಂದು ನೀರಾವರಿ ಸಲಹಾ ಸಮಿತಿಯವರು ನೀರು ಹರಿಸುವ ಸಂಬಂಧ ಸಭೆ ಆಯೋಜಿಸದೆಯೇ ಭದ್ರಾ ಬಲದಂಡೆ ಕಾಲುವೆಗೆ ನೀರು ಹರಿಸುವ ತೀರ್ಮಾನ ಕೈಗೊಂಡಿತ್ತು. ಅದರಂತೆ ಸತತ 100 ದಿನಗಳ ಕಾಲ ನೀರು ಹರಿಸುವ ಅಧಿಸೂಚನೆಯನ್ನೂ ಹೊರಡಿಸಲಾಗಿತ್ತು. ಭದ್ರ ಬಲ ಮತ್ತು ಎಡದಂಡೆ ಕಾಲುವೆಗಳಿಗೆ ನೀರು ಹರಿಸಿದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಇದೀಗ ನೀರು ಬಿಟ್ಟಿರುವುದು ರೈತರಿಗೆ ಬಲ ಬಂದಂತಾಗಿದೆ.









































































































































































































































































































































































































































































































































































































































































































































































































































































































































































































































































































































