ಬಿಜೆಪಿಗೆ ವಾಪಸ್ ಆಗುವಂತೆ ಜಗದೀಶ್ ಶೆಟ್ಟರ್‌ಗೆ ಬಂಪರ್ ಆಫರ್
ಬೆಂಗಳೂರು:
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಕರೆದುಕೊಳ್ಳುವ ಕಾರ್ಯಗಳು ನಡೆದಿವೆ. ಶೆಟ್ಟರ್ ಜತೆ ಮಾತುಕತೆ ನಡೆಸಬಹುದು ಎಂಬ ಹಸಿರು ನಿಶಾನೆಯನ್ನು ಪಕ್ಷದ ವರಿಷ್ಠರು ರಾಜ್ಯ ನಾಯಕರಿಗೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕೆಲ ನಾಯಕರು ಶೆಟ್ಟರ್ ಮನವೊಲಿಕೆ ಮುಂದಾಗಿದ್ದಾರೆ. ಅಲ್ಲದೇ ಅವರಿಗೆ ಈ ಬಾರಿಯ ಲೋಕಸಭಾ ಟಿಕೆಟ್ ಆಫರ್ ನೀಡಿದ್ದಾರೆ ಎನ್ನಲಾಗಿದೆ.
ಶೆಟ್ಟರ್ ಮನವೊಲಿಕೆ ಏಕೆ?
ಕಳೆದ ವಿಧಾನಸಭಾ ಚುನಾವಣೆ ವೇಳೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿಸಿದ್ದರಿಂದ ಕೋಪಗೊಂಡ ಶೆಟ್ಟರ್ ಅವರು ತಮಗೆ ಅನ್ಯಾಯವಾಗಿದೆ ಎಂದು ಆಕ್ರೋಶಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡರೂ ಸಹ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಶೆಟ್ಟರ್ ವರ್ಚಸ್ಸು ಸಹ ಒಂದು ರೀತಿಯಲ್ಲಿ ಕಾರಣವಾಗಿದೆ. ಇದು ಹೈಕಮಾಂಡ್ ಗಮನಕ್ಕೆ ಬಂದಿದ್ದರಿAದ ಇದೀಗ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರನ್ನು ಮನವೊಲಿಸಿ ವಾಪಸ್ ಪಕ್ಷಕ್ಕೆ ಕರೆತರುವ ಬಗ್ಗೆ ರಾಜ್ಯ ನಾಯಕರ ಜತೆ ಚರ್ಚಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಹೀಗಾಗಿ, ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಕರೆತಂದರೆ ಅದು ಅನುಕೂಲವಾಗಬಹುದು ಎಂಬ ಲೆಕ್ಕಾಚಾರವನ್ನು ಪಕ್ಷದ ಸಂಸದೀಯ ಮಂಡಳಿ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹಾಕಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಅವರು ತಮ್ಮ ಚುನಾವಣೆಯ ಹಿನ್ನೆಲೆಯಲ್ಲಿ ಶೆಟ್ಟರ್ ವಾಪಸ್ ಬರಲಿ ಎಂಬ ನಿರೀಕ್ಷೆ ಹೊಂದಿದ್ದಾರೆ ಎನ್ನಲಾಗಿದೆ.
ಲೋಕಸಭಾ ಟಿಕೆಟ್ ಆಫರ್
ಹೌದು…ವಿಧಾಸಭಾ ಟಿಕೆಟ್ ನಿರಾಕರಿಸಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಕರೆತರಲು ಲೋಕಸಭಾ ಟಿಕೆಟ್ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬೆಳಗಾವಿ ಅಥವಾ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಮಾತುಕತೆಗಳು ನಡೆದಿವೆ ಎನ್ನಲಾಗುತ್ತಿದೆ. ಬೆಳಗಾವಿಯಲ್ಲಿ ಶೆಟ್ಟರ್ ತಮ್ಮದೇಯಾದ ವರ್ಚಸ್ಸು ಇಟ್ಟುಕೊಂಡಿದ್ದಾರೆ. ಈಗಾಗಲೇ ತಮ್ಮ ಬೀಗರಾದ ಸುರೇಶ್ ಅಂಗಡಿ ನಿಧನದ ಬಳಿಕ ಎದುರಾದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮಂಗಳಾ ಅಂಗಡಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದರು. ಆದರೆ, ಈ ಬಾರಿ ಬಿಜೆಪಿಗೆ ಕೊಂಚ ಕಷ್ಟಕರವಾಗಿದೆ. ಮಂಗಳ ಅಂಗಡಿಯವರು ಹೇಳಿಕೊಳ್ಳುವಷ್ಟು ಆ್ಯಕ್ಟೀವ್ ಇಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಹೀಗಾಗಿ ಬೆಳಗಾವಿಗೆ ಹೊಸ ಅಭ್ಯರ್ಥಿಯ ಹುಡುಕಾಟ ನಡೆಸಿದ್ದು, ಈ ಸಂದರ್ಭದಲ್ಲಿ ಶೆಟ್ಟರ್ ಹೆಸರು ಕೇಳಿಬಂದಿದೆಯAತೆ.
ಒAದು ವೇಳೆ ಶೆಟ್ಟರ್‌ಗೆ ಟಿಕೆಟ್ ನೀಡಿದರೆ ಬಿಜೆಪಿ ಗೆಲುವು ಸುಲಭವಾಗಲಿದೆ. ಯಾಕಂದ್ರೆ ಬೆಳಗಾವಿಯಲ್ಲಿ ಲಿಂಗಾಯತ ಮತಗಳು ಸಹ ಅಧಿಕವಾಗಿದ್ದರಿಂದ ಶೆಟ್ಟರ್‌ಗೆ ಟಿಕೆಟ್ ನೀಡಿದರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರಗಳು ಪಕ್ಷದಲ್ಲಿ ನಡೆದಿವೆಯಂತೆ. ಒಂದು ವೇಳೆ ಶೆಟ್ಟರ್ ಬಿಜೆಪಿ ಸೇರ್ಪಡೆಗೆ ಒಪ್ಪಿ ಬೆಳಗಾವಿ ಬೇಡ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟರೂ ಸಹ ನೀಡಲು ಬಿಜೆಪಿ ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ಬಿಜೆಪಿ ಪಕ್ಷದಲ್ಲಿ ಶೆಟ್ಟರ್ ವಾಪಸ್ ಕರೆತರುವ ಬಗ್ಗೆ ಏನೋ ಚರ್ಚೆಗಳು ನಡೆದಿವೆ. ಆದರೆ, ಇದಕ್ಕೆ ಶೆಟ್ಟರ್ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.
ಯಾಕಂದ್ರೆ, ಕಳೆದ ವಿಧಾನಸಭಾ ಚುನಾವಣೆ ವೇಳೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿಸಿದ್ದರಿಂದ ಕೋಪಗೊಂಡ ಶೆಟ್ಟರ್ ಅವರು ತಮಗೆ ಅನ್ಯಾಯವಾಗಿದೆ ಎಂದು ಆಕ್ರೋಶಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಲ್ಲದೇ ಕೆಲ ಹೈಕಮಾಂಡ್ ನಾಯಕ ವಿರುದ್ಧ ಬಹಿರಂಗವಾಗಿಯೇ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಭಾರೀ ಮುಜುಗರವನ್ನುಂಟು ಮಾಡಿತ್ತು. ಈ ಎಲ್ಲಾವುಗಳನ್ನು ಮರೆತು ಶೆಟ್ಟರ್ ವಾಪ್ ಬಿಜೆಪಿಗೆ ಘರ್ ವಾಪಸಿ ಮಾಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.













































































































































































































































































































































































































































































































































































































































































































































































































































































































































































































































































































































