ಉದಯನಿಧಿ ಸ್ಟಾಲಿನ್ನನ್ನು ಗಲ್ಲಿಗೇರಿಸಿ: ಕಾಂಗ್ರೆಸ್ ಶಾಸಕ
ಕೋಲಾರ ಅ.02: ಹಿಂದೂ ಧರ್ಮ ಇಲ್ಲ ಎಂದು ಹೇಳುವವರನ್ನು ಗಲ್ಲಿಗೇರಿಸಬೇಕು. ಉದಯನಿಧಿ ಸ್ಟಾಲಿನ್ ಅವರಿಗೆ ದುಡ್ಡು ಜಾಸ್ತಿ ಆಗಿ ಹುಚ್ಚರಾಗಿದ್ದಾರೆ. ಅವರಿಗೆ ಎರಡೂ, ಮೂರು ಹುಚ್ಚು ನಾಯಿ ಕಚ್ಚಿದೆ ಹೀಗಾಗಿ ಹುಚ್ಚರಾಗಿದ್ದಾರೆ. ನಾವು ಇರುವುದು ಭಾರತ ದೇಶದಲ್ಲಿ. ನಿನ್ನ ಧರ್ಮವನ್ನು ನೀನು ಪಾಲನೆ ಮಾಡು. ಧರ್ಮವನ್ನು ಪಾಲನೆ ಮಾಡಬೇಡ ಎಂದು ಹೇಳುವುದಕ್ಕೆ ಯಾರಿಗೂ ಹಕ್ಕಿಲ್ಲ. ನನ್ನ ಧರ್ಮವನ್ನು ಇಲ್ಲ ಎಂದು ಹೇಳುವುದಕ್ಕೆ ನೀನು ಯಾರು? ಎಂದು ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹರಿಹಾಯ್ದರು.
ಕೋಲಾರದ ಗಾಂದಿವನದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಉದಯನಿಧಿ ಹಾಗೆ ಹಲವರು ಸನಾತನ ಧರ್ಮ ಮುಗಿಸಬೇಕು ಅಂತಾರೆ. ಧರ್ಮವನ್ನು ಪಾಲನೆ ಮಾಡಬೇಡ ಅನ್ನಲು ನೀನು ಯಾರು? ಧರ್ಮವನ್ನು ಪಾಲನೆ ಮಾಡಬೇಡಿ ಎಂದು ಯಾರು ಹೇಳಬಾರದು. ನಟ ಪ್ರಕಾಶ್ ರಾಜ್ ಎಂಟು ವರ್ಷದ ಹಿಂದೆ ನಿಮ್ಹಾನ್ಸ್ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇದು ಭಾರತ ದೇಶ, ಬಾಬಾ ಸಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆ ಕೊಟ್ಟಿದ್ದಾರೆ. ಆ ಧರ್ಮ ಈ ಧರ್ಮ ಅಂತ ಯಾರು ಅನ್ನುತ್ತಾರೆ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದರು.
ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು
ಕೋಲಾರದಲ್ಲಿ ತಲವಾರ್ ಪ್ರದರ್ಶನ ವಿಚಾರವಾಗಿ ಮಾತನಾಡಿದ ಅವರು ಕತ್ತಿ ಯಾರೇ ಹಿಡಿದರೂ, ಯಾರೇ ಕಾನೂನು ವಿರುದ್ಧ ನಡೆದರೂ ಅವರ ಮೇಲೆ ಪ್ರಕರಣ ದಾಖಲಾಗುತ್ತದೆ. ಯಾರೇ ಆಗಲಿ, ಯಾವುದೇ ಜಾತಿಯಾಗಲಿ, ಕಾನೂನು ಎಲ್ಲಾರಿಗೂ ಒಂದೇ. ತಪ್ಪು ಯಾರೇ ಮಾಡಿದರೂ ಶಿಕ್ಷೆಯಾಗಲೇ ಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಈ ರೀತಿ ಘಟನೆ ನಡೆಯುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಸರ್ಕಾರ ಇದ್ದಾಗಲೂ ಇಂತಹ ಘಟನೆಗಳು ನಡೆದಿವೆ. ಕೆಲವೊಂದು ಅಕಸ್ಮಿಕವಾಗಿ ನಡೆಯುತ್ತದೆ. ಅದನ್ನು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.









































































































































































































































































































































































































































































































































































































































































































































































































































































































































































































































































































































