July 29, 2026
#ಬೆಂಗಳೂರು

2030ರ ವೇಳೆಗೆ 5,000 ಕೋಟಿ ರೂ. ವಹಿವಾಟು ಗುರಿ

ಬೆಂಗಳೂರು:
ಯಶವಂತಪುರದಲ್ಲಿ ಇರುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಆವರಣದಲ್ಲಿ ಸರ್ಕಾರಿ ಕಚೇರಿಗಳಿಗೆ ಜಾಗ ಒದಗಿಸಲು ಸುಸಜ್ಜಿತ ಸಂಕೀರ್ಣ ನಿರ್ಮಿಸಲಾಗುವುದು. ಮುಂದಿನ 100 ವರ್ಷಗಳ ಅವಧಿಗೆ ಕಾರ್ಖಾನೆಯ ವಿಸ್ತರಣೆಗೆ ಬೇಕಾದ ಜಾಗವನ್ನು ಮೀಸಲಿಟ್ಟುಕೊಂಡು ಈ ಕೆಲಸ ಕೈಗೊಳ್ಳಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷರೂ ಆಗಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹೇಳಿದರು.
100 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ ಸಿಬ್ಬಂದಿ ವರ್ಗಕ್ಕೆ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಮತ್ತು ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದ ಆವರಣದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಕಚೇರಿಗಳಿಗೆ ಸ್ಥಳಾವಕಾಶ ಕೊಡಲಾಗಿದೆ. ಅದೇ ಮಾದರಿಯನ್ನೂ ಕೆಎಸ್‌ಡಿಎಲ್‌ನಲ್ಲೂ ಅಳವಡಿಸಿಕೊಳ್ಳಲಾಗುವುದು. ಕೆಎಸ್‌ಡಿಎಲ್ ವತಿಯಿಂದಲೇ ಹಂತಹAತವಾಗಿ ಇದನ್ನು ನಿರ್ಮಿಸಲಾಗುವುದು. ಇದರಿಂದ ಸಂಸ್ಥೆಯು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಸುಲಭವಾಗಲಿದೆ ಎಂದು ನುಡಿದರು.
5,000 ಕೋಟಿ ರೂ. ವಹಿವಾಟಿನ ಗುರಿ:
ಮೈಸೂರು ಮಹಾರಾಜರು ಮತ್ತು ಸರ್ ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಕೆಎಸ್‌ಡಿಎಲ್ ಸದ್ಯಕ್ಕೆ ವಾರ್ಷಿಕವಾಗಿ 1,200 ಕೋಟಿ ರೂ.ಗಳಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದ್ದು, ಲಾಭದ ಹಾದಿಯಲ್ಲಿದೆ. ಇದು 2030 ರ ಹೊತ್ತಿಗೆ 5,000 ಕೋಟಿ ರೂ. ಮುಟ್ಟಬೇಕು. ವಿದೇಶಗಳಲ್ಲೂ ಮಾರುಕಟ್ಟೆ ಸೃಷ್ಟಿಗೆ ಆದ್ಯತೆ ಬೀಡಲಾಗುತ್ತಿದ್ದು, ಯೂರೋಪ್ ಮತ್ತು ಅರಬ್ ರಾಷ್ಟ್ರಗಳಿಗೆ ಕೆಎಸ್‌ಡಿಎಲ್ ಉತ್ಪನ್ನಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ರಫ್ತು ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಕೆಎಸ್‌ಡಿಎಲ್ ಆವರಣದಲ್ಲಿ ದಿನನಿತ್ಯದ ದಿನಸಿ ಪದಾರ್ಥಗಳು, ಡೆಟಾಲ್, ಹ್ಯಾಂಡ್ ಸೋಪ್ ಮುಂತಾದವೆಲ್ಲ ಲಭ್ಯವಾಗಬೇಕು. ಸದ್ಯಕ್ಕೆ ಸಾಬೂನು ಮತ್ತು ಮಾರ್ಜಕಗಳ ಮಾರುಕಟ್ಟೆ ವಿತರಣೆ ಚೆನ್ನಾಗಿ ನಡೆಯುತ್ತಿದೆ. ಸಂಸ್ಥೆಯು ಕಾರ್ಮಿಕರ ಯೋಗಕ್ಷೇಮಕ್ಕೂ ಆದ್ಯತೆ ನೀಡುವ ಉತ್ತರದಾಯಿತ್ವವನ್ನು ಪ್ರದರ್ಶಿಸಿದೆ ಎಂದು ಹೇಳಿದರು.
ಎಂಎಸ್‌ಐಎಲ್‌ಗೆ ಮತ್ತಷ್ಟು ಬಲ: ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ನಡೆಸುವ ವಹಿವಾಟನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, ಕೇರಳ ಮಾದರಿಯಲ್ಲಿ ಚಿಟ್ ಫಂಡ್ ನಡೆಸಲಾಗುವುದು. ಇದರ ಮೂಲಕ ವಾರ್ಷಿಕ 10,000 ಕೋಟಿ ರೂ. ವ್ಯವಹಾರ ಬೆಳೆಸಲಾಗುವುದು. ಇದರಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸಹಕಾರ ತೆಗೆದುಕೊಂಡು, ಖಾಸಗಿಯವರಿಗೆ ಆರೋಗ್ಯಕರ ಸ್ಪರ್ಧೆ ನೀಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

Leave a comment

Your email address will not be published. Required fields are marked *