October 30, 2026
#ಬೆಂಗಳೂರು

ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಸರ್ಕಾರ ಇದೆ

ಬೆಂಗಳೂರು: ಕಾವೇರಿ ನೀರು  ವಿಚಾರವಾಗಿ ಹೋರಾಟ ನಡೆಸುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೋರಾಟಗಾರರು ಏನಾದರೂ ನಿಮ್ಮಿಂದ ರಾಜೀನಾಮೆ ಕೇಳಿದ್ರಾ ಅಥವಾ ಅಧಿಕಾರ ಕೇಳಿದ್ದಾರಾ? ನೀರು ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಕ್ಕೆ ಬಂಧಿಸಿದ್ದೀರಿ. ಇವತ್ತು ರಾಜ್ಯದಲ್ಲಿ ಪೊಲೀಸ್ ಸರ್ಕಾರ ಇದೆ ಎಂದು ವಾಗ್ದಾಳಿ ನಡೆಸಿದರು.

https://a88ca0ebeefaff85e7f369249b09b122.safeframe.googlesyndication.com/safeframe/1-0-40/html/container.html

ಬೆಂಗಳೂರು ನಗರದಲ್ಲಿ ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿಲ್ಲ. ಆದರೆ ಈಗ ಕಾಂಗ್ರೆಸ್ ಸರ್ಕಾರ ಹಿಂದೆಂದೂ ಮಾಡದ ರೀತಿ ಪೊಲೀಸ್ ಕಾರ್ಯಾಚರಣೆ ಮಾಡಿಸಿದೆ. ಬಂದ್ ಯಶಸ್ವಿ ಆಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್​ಗೆ ಸಹಕಾರ ಕೊಟ್ಟಿದ್ದಾರೆ. ಬಂದ್ ಯಶಸ್ವಿಯಾಗಿದೆ ಎಂದರು.

ಜನ ಆಕ್ರೋಶ ಹೊರ ಹಾಕಿದ್ದಾರೆ, ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದ ಅವರು, ಈ ಹಿಂದೆ ಮೊಂಡು ವಾದ ಮಾಡಿ ಮೇಕೆದಾಟು ಪಾದಯಾತ್ರೆ ಮಾಡಿದರು. ಬೆಂಗಳೂರಲ್ಲಿ ಸಭೆಗೆ ಅವಕಾಶವಿಲ್ಲ ಅಂದರೂ ಪ್ರತಿಭಟನಾ ಸಭೆ ಮಾಡಿದರು. ಆದರೆ ಇಂದು ರೈತ ನಾಯಕ ಕುರುಬೂರು ಶಾಂತಕುಮಾರ್ ಅವರಿ​ಗೆ​ ರ್ಯಾಲಿ ನಡೆಸಲು ಅವಕಾಶ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾವೇರಿ ಕಣಿವೆ ವ್ಯಾಪ್ತಿಯ ಜನರಿಗೆ ಸರ್ಕಾರ ವಿಶ್ವಾಸ ದ್ರೋಹಮಾಡಿದೆ. ತಮಿಳುನಾಡು ಸಿಎಂ ಸ್ಟಾಲಿನ್ ಸಮಾಧಾನಗೊಳಿಸಲು ನೀರು ಹರಿಸಲಾಗಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು. ಮೊದಲು ನೀರು ಬಿಟ್ಟು ಈಗ ಪ್ರಧಾನಿ ಮಧ್ಯಪ್ರವೇಶಿಸಲಿ ಎಂದರೆ ಹೇಗೆ? ರಾಜಕೀಯವಾಗಿ ಪರಿಹಾರ ಆಗಬೇಕು ಅಂದರೆ ಡಿಎಂಕೆಗೆ ಮನವರಿಕೆ ಮಾಡಲು ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಲಿ ಎಂದರು.

ಕಾವೇರಿ ಕಣಿವೆ ವ್ಯಾಪ್ತಿಗೆ ಅಧ್ಯಯನ ತಂಡ ಕಳಿಸುವಂತೆ ಹೆಚ್​ಡಿ ದೇವೇಗೌಡ ಅವರು ಹೇಳಿದ್ದಾರೆ. ವಸ್ತು ಸ್ಥಿತಿ ತಿಳಿಯಲು ಕೇಂದ್ರ ತಂಡ ಕಳಿಸುವಂತೆ ದೇವೇಗೌಡರು ಹೇಳಿದ್ದಾರೆ. ಟ್ರಿಬ್ಯುನಲ್​ ಆದೇಶಕ್ಕಿಂತ ಮೊದಲು ಕೇಂದ್ರ ಮಧ್ಯಪ್ರವೇಶಕ್ಕೆ ಅವಕಾಶ ಇತ್ತು. ಈಗ ಕಾನೂನಾತ್ಮಕ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ. ಒಂದು ವೇಳೆ ಕೇಂದ್ರ ಮಧ್ಯಪ್ರವೇಶಿಸಿದರೆ ಒಳ್ಳೆಯದೇ. ಆದರೆ ಕಾಂಗ್ರೆಸ್​​ನವರು ತಮಿಳುನಾಡಿನ ಡಿಎಂಕೆ ಜತೆ ಮಾತಾಡಿ ಒಪ್ಪಿಸಲಿ ಎಂದರು.

ತಮಿಳುನಾಡು ಅಕ್ರಮವಾಗಿ ನೀರು ಬಳಕೆ ಮಾಡಿದೆ, ಕುರುವೈ ಬೆಳೆ ಹಾಕಿದೆ. ಅವರು ಅಕ್ರಮವಾಗಿ ಬೆಳೆದದ್ದನ್ನು ಸ್ಯಾಟಲೈಟ್ ಮೂಲಕ ಸರ್ವೆ ಸಾಧ್ಯ. ಸರ್ಕಾರ ಡಿಎಂಕೆಯನ್ನೇ ಸಂತೃಪ್ತಿಪಡಿಸುವುದರಲ್ಲೇ ನಿರತವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಅದಕ್ಕಾಗಿ ಡಿಎಂಕೆಯನ್ನು ಓಲೈಕೆ ಮಾಡಲು ಇಲ್ಲಿನ ಕಾಂಗ್ರೆಸ್ ನಾಯಕರು ಅವರ ಬಗ್ಗೆ ಏನೂ ಮಾತಾಡುತ್ತಿಲ್ಲ ಎಂದರು.

Leave a comment

Your email address will not be published. Required fields are marked *