September 13, 2026
#ಬೆಂಗಳೂರು

ನಾನು ಈ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ

ಬೆಂಗಳೂರು:
ನಾನು ಈ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಇನ್ನೂ ಎರಡು ವರ್ಷಗಳ ಕಾಲ ರಾಜ್ಯಸಭಾ ಸದಸ್ಯ ಅವಧಿ ಇದೆ. ನನಗೆ 91 ವರ್ಷ ವಯಸ್ಸಾಗಿದೆ. ಜ್ಞಾಪಕ ಶಕ್ತಿ ಇದೆ, ಓಡಾಡಲು ಕಷ್ಟವಾಗುತ್ತದೆ. ಆದರೂ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ಹೇಳಿದರು. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಬಗ್ಗೆ ನಿರ್ಧಾರ ಮಾಡಿಲ್ಲ. ಗಾಳಿ ಸುದ್ದಿಗಳ ಬಗ್ಗೆ ನಾನು ಮಾತನಾಡಲ್ಲ. ಮೋದಿ ಅವರು ಏನಾದರೂ ಹೇಳಿದರೇ, ಅಗ ನಾವೆಲ್ಲಾ ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.
ಇನ್ನು ಹೆಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ವಿಚಾರ ನನ್ನ ಮುಂದೆ ಚರ್ಚೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಅವರು ಯಾವುದನ್ನೂ ಬಿಟ್ಟುಕೊಡುವುದಿಲ್ಲ. ಅವರ ಜೊತೆಗಿರುವ ಪೊಲೀಸರಿಗೂ ಗೊತ್ತಾಗಲ್ಲ ಎಂದು ಹೇಳಿದರು.
ಹಾಸನದಿಂದ ಪ್ರಜ್ವಲ್ ಸ್ಪರ್ಧೆ:
ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅಥವಾ ಡಾ.ಮಂಜುನಾಥ್ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾಕೆ ಆ ಸಮಸ್ಯೆಗಳು? ಪ್ರಜ್ವಲ್‌ಗೆ ಪ್ರಧಾನಿ ಮೋದಿ ಅವರು ಆಶೀರ್ವಾದ ಮಾಡಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿ ಅವರು ಕೂಡಾ ಆಶೀರ್ವಾದ ಮಾಡುತ್ತಾರೆ. ನಾನೂ ಆಶೀರ್ವಾದ ಮಾಡುತ್ತೇನೆ, ಜನರು ಆಶೀರ್ವಾದ ಮಾಡುತ್ತಾರೆ ಎಂದು ಹೇಳುವ ಮೂಲಕ ಹಾಸನದಿಂದ ಮತ್ತೆ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎಂಬ ಸುಳಿವು ಬಿಟ್ಟುಕೊಟ್ಟರು.
ಸಿದ್ದರಾಮಯ್ಯ ರಾಮನ ದರ್ಶನ ಮಾಡಿಕೊಂಡು ಬರಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮನ ದರ್ಶನ ಮಾಡಿಕೊಂಡು ಬರಲಿ. ಸಿಎಂ ಸಿದ್ದರಾಮಯ್ಯ ಅವರು ಆಯೋಧ್ಯೆಗೆ ಜನವರಿ ೨೨ರಂದು ಹೋಗುವುದಿಲ್ಲ ನಂತರ ಹೋಗುತ್ತೇನೆಂದು ಹೇಳಿದ್ದಾರೆ. ಅವರ ಪಕ್ಷ ನಿರ್ಧಾರ ತೆಗೆದುಕೊಂಡಿದೆ. ಮುಜರಾಯಿ ಇಲಾಖೆ ದೇವಾಲಯದಲ್ಲಿ ಪೂಜೆಗೆ ಸೂಚಿಸಿದೆ. ಸಾಫ್ಟ್ ಹಿಂದುತ್ವವೋ, ಹಾರ್ಡ್ ಹಿಂದುತ್ವವೋ ಒಟ್ಟಿನಲ್ಲಿ ಸಿದ್ದರಾಮಯ್ಯ ರಾಮನ ದರ್ಶನ ಮಾಡಿಕೊಂಡು ಬರಲಿ. ಶ್ರೀರಾಮನ ಆಶೀರ್ವಾದ ಪಡೆದುಕೊಳ್ಳಲಿ. ನಾನು ಆಯೋಧ್ಯೆಗೆ ಭೇಟಿ ನೀಡುತ್ತೇನೆ. ಸಿದ್ದರಾಮಯ್ಯ ಯುವನಿಧಿ ಕಾರ್ಯಕ್ರಮ ತಂದಿದ್ದಾರೆ. ಒಳ್ಳೆಯದು, ನಾನು ಅದನ್ನ ಅಭಿನಂದಿಸುತ್ತೇನೆ ಎಂದರು.

Leave a comment

Your email address will not be published. Required fields are marked *