ರಾಮ್ ಚರಣ್ ಚಿತ್ರದಲ್ಲಿ ಶಿವಣ್ಣಸದ್ಯಕ್ಕೆ ಏನೂ ಹೇಳಲಾರೆ ಎಂದ ನಟ
ಈಗಾಗಲೇ ಎರಡು ತಮಿಳು ಸಿನಿಮಾದಲ್ಲಿ ನಟಿಸಿರುವ ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್, ಇದೀಗ ತೆಲುಗು ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ತೆಲುಗಿನ ಹೆಸರಾಂತ ನಟ ರಾಮ್ ಚರಣ್ ನಟನೆಯ ಹೊಸ ಚಿತ್ರದಲ್ಲಿ ಶಿವಣ್ಣ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಸ್ವತಃ ಶಿವರಾಜ್ ಕುಮಾರ್ ಮಾತನಾಡಿದ್ದಾರೆ.
ರಾಮ್ ಚರಣ್ ಜೊತೆಗಿನ ಸಿನಿಮಾ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ‘ತೆಲುಗಿನಲ್ಲಿ ಆಫರ್ ಬಂದಿದ್ದು ನಿಜ. ರಾಮ್ ಚರಣ್ ಅವರ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಬುಚ್ಚಿ ಬಾಬು ನನ್ನನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ಆ ಸಿನಿಮಾ ಬಗ್ಗೆ ಸದ್ಯ ಏನೂ ಹೇಳಲಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಒಂದು ವೇಳೆ ಆ ಸಿನಿಮಾದಲ್ಲಿ ಶಿವಣ್ಣ ನಟಿಸದೇ ಇದ್ದರೆ ಅಭಿಮಾನಿಗಳಿಗೆ ನಿರಾಸೆ ಆಗೋದು ಬೇಡ ಎನ್ನುವುದು ಚಿತ್ರದ ಬಗ್ಗೆ ಮಾತನಾಡದೇ ಇರುವುದಕ್ಕೆ ಕಾರಣವಂತೆ. ಮುಂದಿನ ದಿನಗಳಲ್ಲಿ ಚಿತ್ರ ತಂಡವೇ ಹಲವು ವಿಷಯಗಳನ್ನು ಹೇಳಬಹುದು ಎನ್ನುವುದು ಶಿವಣ್ಣ ಅವರ ಲೆಕ್ಕಾಚಾರ. ಸದ್ಯ ಶಿವರಾಜ್ ಕುಮಾರ್ ಅವರು ತಮ್ಮ ತಮಿಳಿನ ಮತ್ತೊಂದು ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಧನುಷ್ ಜೊತೆ ಆಕ್ಟ್ ಮಾಡಿರೋ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಇದೇ ಸಂಕ್ರಾAತಿಗೆ ಬಿಡುಗಡೆ ಆಗುತ್ತಿದೆ. ನಿನ್ನೆಯಷ್ಟೇ ಹಾಡು ಕೂಡ ರಿಲೀಸ್ ಆಗಿದೆ. ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಶಿವಣ್ಣ ಕೂಡ ಭಾಗಿಯಾಗಿದ್ದರು.













































































































































































































































































































































































































































































































































































































































































































































































































































































































































































































































































































































