ಬಿಲ್ಕಿಸ್ ಬಾನೊ ಕೇಸ್; ಶರಣಾಗತಿಗೆ ಕಾಲಾವಕಾಶ ಕೋರಿದ್ದ ಅಪರಾಧಿಗಳ ಅರ್ಜಿ ತಿರಸ್ಕರಿಸಿದ ಸುಪ್ರೀಂ
ನವದೆಹಲಿ: ಶರಣಾಗತಿಗೆ ಕಾಲಾವಕಾಶ ಕೋರಿ ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಭಾನುವಾರದ ಒಳಗೆ ಶರಣಾಗುವಂತೆ ಸೂಚನೆ ನೀಡಿದೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ನೇತೃತ್ವದ ಪೀಠವು ಅರ್ಜಿ ವಿಚಾರಣೆ ನಡೆಸಿತು. ಕುಟುಂಬದವರ ವಿವಾಹ, ಪೋಷಕರ ಜವಾಬ್ದಾರಿ ಕಾರಣ ನೀಡಿ ಸಲ್ಲಿಸಿರುವ ಅರ್ಜಿಗಳನ್ನು ಕೋರ್ಟ್ ಪರಿಗಣಿಸಿಲ್ಲ. ಪ್ರಕರಣದ 11 ಅಪರಾಧಿಗಳು ಅಧಿಕಾರಿಗಳ ಮುಂದೆ ಶರಣಾಗುವಂತೆ ತಿಳಿಸಿದೆ.
ಗೋಧ್ರಾ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 11 ಮಂದಿಯನ್ನು ಗುಜರಾತ್ ಸರ್ಕಾರವು 2022 ರ ಸ್ವಾತಂತ್ರ್ಯ ದಿನದಂದು ಬಳಕೆಯಲ್ಲಿಲ್ಲದ ಕಾನೂನಿನ ಆಧಾರದ ಮೇಲೆ ಬಿಡುಗಡೆ ಮಾಡಿತ್ತು.
ಬಾನೊ ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು ಅವರ ಬಿಡುಗಡೆಯ ವಿರುದ್ಧ ಮೇಲ್ಮನವಿಗಳನ್ನು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಅಪರಾಧಿಗಳ ಬಿಡುಗಡೆ ಆದೇಶವನ್ನು ರದ್ದುಗೊಳಿಸಿತ್ತು.








































































































































































































































































































































































































































































































































































































































































































































































































































































































































































































































































































































