ಬಿಜೆಪಿಯವರದ್ದು ಬೋಗಸ್ ಪ್ರೀತಿ, ಇವೆಲ್ಲಾ ನಾಟಕ ಬಂದ್ ಮಾಡಲಿ: ಮಂಕಾಳು ವೈದ್ಯ
ಕಾರವಾರ: ಬಿಜೆಪಿಯವರು ರಾಜಕಾರಣಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ. ಬಿಜೆಪಿಯವರದ್ದು ಮೂರು ಅಜೆಂಡಾವಿದೆ. ಸುಳ್ಳು ಹೇಳೋದು, ಗಲಭೆ ಮಾಡೋದು, ದೇವರ ಹೆಸರಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರದ್ದು ಬೋಗಸ್ ಭಕ್ತಿ. ರಾಮಮಂದಿರ ಉದ್ಘಾಟನೆ ಆಗದೇ ಮಂತ್ರಾಕ್ಷತೆ ಕೊಡುತ್ತಿದ್ದಾರೆ. ಪೂಜೆಯೇ ಆಗದೇ ಮಂತ್ರಾಕ್ಷತೆ ಹೇಗೆ ಕೊಡುತ್ತಾರೆ? ಅಕ್ಷತೆ ಕೊಟ್ಟು, ಮಂತ್ರಾಕ್ಷತೆ ಕೊಟ್ಟು ಕರೆಯುವುದೇನೋ ಸರಿ. ಯಾಕೆ ಮೋದಿ ಫೋಟೋ, ಕಟೌಟ್ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಅಕ್ಷತೆ ಕೊಡುವಲ್ಲಿ ಮೋದಿ ವಿಚಾರ ಏಕೆ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದು ಯಾರ ದುಡ್ಡು? ಹಣ ನಾವು ಕೂಡ ಕೊಟ್ಟಿದ್ದೇವೆ. ಇದೆಲ್ಲಾ ನಾಟಕವನ್ನು ಬಿಜೆಪಿಯವರು ಬಂದ್ ಮಾಡುವುದು ಒಳ್ಳೆಯದು. ಬಿಜೆಪಿಯವರು ಸತ್ಯ ಹೇಳುವುದಿಲ್ಲ. ಸುಳ್ಳನ್ನೇ ಹೇಳುತ್ತಾರೆ. ಯಾವ ಎಲೆಕ್ಷನ್‌ನಲ್ಲೂ ಗಲಭೆ ಮಾಡದೇ ಇಲ್ಲ. ರಾಮನ ನಿಜಭಕ್ತರಾದರೇ ಹೀಗೆ ಮಾಡುವುದಿಲ್ಲ. ನಿಜವಾದ ಭಕ್ತರು ಗಲಾಟೆ ಮಾಡುವುದಿಲ್ಲ. ನಾವು ಕೂಡ ರಾಜ್ಯದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ ಎಂದರು. ಇನ್ನೂ ಬಿಕೆ ಹರಿಪ್ರಸಾದ್ ಅವರು ನೀಡಿದ ಗೋಧ್ರಾ ಹತ್ಯೆ ಹೇಳಿಕೆ ಸರಿಯಾಗಿದ್ದು, ಅವರು ಜನರಲ್ಲಿ ಜಾಗೃತಿ ಮೂಡಿಸಲು ಗೋಧ್ರಾ ಹತ್ಯೆ ಹೇಳಿಕೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.








































































































































































































































































































































































































































































































































































































































































































































































































































































































































































































































































































































