July 29, 2026
#ಬೆಂಗಳೂರು

ಎಲ್‌ಕೆ ಅಡ್ವಾಣಿಗೆ ಭಾರತ ರತ್ನ: ಕರ್ನಾಟಕ ಬಿಜೆಪಿ ನಾಯಕರ ಹರ್ಷ

ಬೆಂಗಳೂರು:
ಬಿಜೆಪಿಯ ಭೀಷ್ಮ ಎಲ್‌ಕೆ ಅಡ್ವಾಣಿಗೆ ಭಾರತ ರತ್ನ ಘೋಷಣೆಯಾಗಿರುವ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಕರ್ಣಾಟಕದ ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ. ಉಪಪ್ರಧಾನಿಗಳಾಗಿ ಅಡ್ವಾಣಿ ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲಾಗದು ಎಂದು ಬಿಎಸ್ ಯಡಿಯೂರಪ್ಪ ಸಾಮಾಜಿಕ ಮಾಧ್ಯಮ ಎಕ್ಸ್ ಸಂದೇಶದಲ್ಲಿ ಬಣ್ಣಿಸಿದ್ದಾರೆ.
‘ಹಿರಿಯ ನೇತಾರ, ಧೀಮಂತ ನಾಯಕ ಆದರಣೀಯ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿಯಿಂದ ಗೌರವಿಸಲಾಗುತ್ತಿರುವುದು ಅತ್ಯಂತ ಹೆಮ್ಮೆಯ ಮತ್ತು ಅಭಿನಂದನೀಯ ಸಂಗತಿ. ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಅವರ ಪ್ರಯತ್ನ ಅಸಾಧಾರಣವಾದದ್ದು. ಹಲವಾರು ದಶಕಗಳ ಸಾರ್ವಜನಿಕ ಜೀವನದಲ್ಲಿ ಅವರ ನಾಯಕತ್ವ, ಸಂಸದರಾಗಿ, ಕೇಂದ್ರ ಸಚಿವರಾಗಿ, ಉಪಪ್ರಧಾನಿಗಳಾಗಿ ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲಾಗದು’ ಎಂದು ಯಡಿಯೂರಪ್ಪ ಉಲ್ಲೇಖಿಸಿದ್ದಾರೆ.
ಭಾರತ ರತ್ನ ಅಡ್ವಾಣಿ ಬಗ್ಗೆ ಬಿಎಸ್ ಯಡಿಯೂರಪ್ಪ ಟ್ವೀಟ್
‘ವೈಯಕ್ತಿಕವಾಗಿ ಕೂಡ, ಅವರೊಂದಿಗಿನ ಒಡನಾಟ, ಸಂಘಟನಾ ಕಾರ್ಯಗಳಲ್ಲಿ ಅವರ ಮಾರ್ಗದರ್ಶನಗಳನ್ನು ನಾನು ಎಂದಿಗೂ ಮರೆಯಲಾರೆ. ಆ ಮೇರು ನಾಯಕನಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಸಲ್ಲಿಸಲಾಗುತ್ತಿರುವ ಈ ಸಾರ್ಥಕ ಸಂದರ್ಭದಲ್ಲಿ, ಪಕ್ಷದ ಕಾರ್ಯಕರ್ತರ ಹಾಗೂ ಅವರ ಅಭಿಮಾನಿಗಳ ಪರವಾಗಿ ಅವರಿಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇನ್ನೂ ಸುದೀರ್ಘ ಕಾಲ ಆ ದೇವರು ಅವರಿಗೆ ಉತ್ತಮ ಆರೋಗ್ಯದೊಂದಿಗೆ ನಮಗೆ ಪ್ರೇರಣೆ ನೀಡುವ ಶಕ್ತಿಯನ್ನು ದಯಪಾಲಿಸಲಿ ಎಂದು ಕೋರುತ್ತೇನೆ’ ಎಂಬುದಾಗಿ ಯಡಿಯೂರಪ್ಪ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ಮನೆಯವರಿಗೆ ಪ್ರಶಸ್ತಿ ಸಿಕ್ಕಂತಾಗಿದೆ: ಅಶೋಕ್
ಎಲ್‌ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆಯಾಗಿರುವುದು ನಮ್ಮ ಮನೆಯವರಿಗೇ ಪ್ರಶಸ್ತಿ ಸಿಕ್ಕಷ್ಟು ಖುಷಿಯಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹರ್ಷ ವ್ಯಕ್ತಪಡಿಸಿದ್ದಾರೆ. ಒಬ್ಬ ಮಹಾನ್ ವ್ಯಕ್ತಿಗೆ ಭಾರತ ರತ್ನ ಸಿಕ್ಕಿದ್ದು ಸಂತಸದ ವಿಚಾರ. ಅಡ್ವಾಣಿಗೆ ಭಾರತ ರತ್ನ ಸಿಕ್ಕಿದ್ದು ನಮಗೇ ಸಿಕ್ಕಂತಾಗಿದೆ. ನಮಗೆ ಒಂಥರಾ ರೋಮಾಂಚನ ಆಗುತ್ತಿದೆ. ರಾಜ್ಯಕ್ಕೆ ಎಲ್.ಕೆ.ಅಡ್ವಾಣಿ ಅವರ ಕೊಡುಗೆ ಅಪಾರ ಎಂದು ಅಶೋಕ್ ತಿಳಿಸಿದ್ದಾರೆ.
ಇವತ್ತು ಭಾರತೀಯ ಜನತಾ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಹಬ್ಬದ ದಿನ. ಭಾರತೀಯ ಜನತಾ ಸಂಘವನ್ನು, ಜನತಾ ಪಕ್ಷವನ್ನು ಕಟ್ಟಿ ಬೆಳೆಸಿ ಅನೇಕ ರಾಜ್ಯ ಗಳಲ್ಲಿ ಭಾರತದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರಣಿಭೂತರಾಗಿರುವಂತಹ ಹಿರಿಯ ನಾಯಕರಾದ ಲಾಲ್ ಕೃಷ್ಣಾ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆಯಾಗಿರುವುದು ತುಂಬಾ ಹೆಮ್ಮೆಯ ಸಂಗತಿ ಎಂದು ಭಾವಿಸುತ್ತೇನೆ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.
ಅಡ್ವಾಣಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ
ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಭಾರತರತ್ನ’ ಗೌರವಕ್ಕೆ ಪಾತ್ರರಾಗಿರುವ ಹಿರಿಯ ರಾಜಕಾರಣಿ, ಮುತ್ಸದ್ದಿ, ಬಿಜೆಪಿ ಭೀಷ್ಮ ಹಾಗೂ ಮಾಜಿ ಉಪ ಪ್ರಧಾನಿಗಳಾದ ಎಲ್‌ಕೆ ಅಡ್ವಾಣಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಅತ್ಯುನ್ನತ ಗೌರವಕ್ಕೆ ಅರ್ಹ ವ್ಯಕ್ತಿಯನ್ನು ಗುರುತಿಸಿ ಪುರಸ್ಕಾರ ಘೋಷಿಸಿರುವ ಕೇಂದ್ರ ಸರಕಾರ ಹಾಗೂ ಪ್ರಧಾನಿಗಳಾದ ನರೇಂದ್ರ ಮೋದಿ ಅವರಿಗೆ ಅಭಿವಂದನೆಗಳು. ಭಾರತೀಯ ರಾಜಕಾರಣದಲ್ಲಿ ನಿಷ್ಠೆ, ಬದ್ಧತೆ, ಸ್ನೇಹಶೀಲತೆ ಹಾಗೂ ಕಠಿಣ ಪರಿಶ್ರಮಕ್ಕೆ ಅನ್ವರ್ಥವಾದ ಅಡ್ವಾಣಿ ಅವರು ಎಲ್ಲರಿಗೂ ಪ್ರೇರಣೆ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ ಎಂಬುದಾಗಿ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Leave a comment

Your email address will not be published. Required fields are marked *