ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಐಟಿ ದಾಳಿ ಅಂತ್ಯ
ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಐಟಿ ದಾಳಿ ಮುಕ್ತಾಯವಾಗಿದೆ. ನಗರದ ಮಾನ್ಯತಾ ಟೆಕ್ಪಾರ್ಕ್ನಲ್ಲಿರುವ ನಿವಾಸದಲ್ಲಿ ಕಳೆದ 42 ಗಂಟೆಗಳಿಂದ ನಡೆದ ಪರಿಶೀಲನೆ ಅಂತ್ಯವಾಗಿದೆ. ಮಹತ್ವದ ದಾಖಲೆಗಳೊಂದಿಗೆ ಪಂಚನಾಮೆ ಕಾರ್ಯ ಪೂರ್ಣಗೊಳಿಸಿ ಐಟಿ ಅಧಿಕಾರಿಗಳು ಹೊರಟಿದ್ದಾರೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಮೆಟ್ರೋ ಕಾರ್ಪ್ ಕಂಪನಿ ಪಾಲುದಾರರಾಗಿರುವ ಪ್ರಮೋದ್, ಪ್ರದೀಪ್ಗೆ ಐಟಿಯಿಂದ ನೋಟಿಸ್ ನೀಡಲಾಗಿದೆ.
ಐಟಿ ದಾಳಿ ಅಂತ್ಯ ಬಳಿಕ ಅಂಬಿಕಾಪತಿ ಪುತ್ರ ಪ್ರದೀಪ್ ಪ್ರತಿಕ್ರಿಯೆ ನೀಡಿದ್ದು, 15 ವರ್ಷಗಳಿಂದ ರಿಯಲ್ ಎಸ್ಟೇಟ್ ಹಾಗೂ ಬ್ಯುಸಿನೆಸ್ ಮಾಡುತ್ತಿದ್ದೇವೆ. ಹಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಿ ಬಿಡಿಸಿಕೊಳ್ಳುತ್ತೇವೆ. ಯಾವುದೇ ಹವಾಲ ಹಣ ಅಲ್ಲ, ನಮ್ಮ ಬ್ಯುಸಿನೆಸ್ಗೆ ಸಂಬಂಧಿಸಿದ್ದು. ಐಟಿ ವಿಚಾರಣೆಗೆ ಹಾಜರಾಗಿ ಸೂಕ್ತ ದಾಖಲಾತಿ ಒದಗಿಸುತ್ತೇವೆ ಎಂದು ಹೇಳಿದ್ದಾರೆ.
ಮಂಚದ ಕೆಳಗೆ ಸಿಕ್ಕಿದ್ದು ಬರೋಬ್ಬರಿ 40 ಕೋಟಿ ರೂ. ಅಧಿಕ
ಐಟಿ ದಾಳಿ ವೇಳೆ ಮಂಚದ ಕೆಳಗೆ ಬರೋಬ್ಬರಿ 40 ಕೋಟಿ ರೂ. ಅಧಿಕ ಹಣ ಸಿಕ್ಕಿದೆ. ಈ ಕೋಟಿ ರಹಸ್ಯ ಬೇಧಿಸಿರುವದ ಐಟಿ ಅಧಿಕಾರಿಗಳು ಅಂಬಿಕಾ ಪತಿ ಮನೆಯಲ್ಲೇ ರಾತ್ರಿ ತಂಗಿದ್ದು, ಇವತ್ತು ಕೂಡಾ ಪರಿಶೀಲನೆ ಮುಂದುವರೆಸಿದ್ದರು. ಮಾನ್ಯತಾ ಟೆಕ್ ಪಾರ್ಕ್ನ ಮನೆಯಲ್ಲಿ ಶೋಧ ನಡೆದಿದ್ದು, ನಿನ್ನೆ ರಾತ್ರಿ ಲಾಕರ್ನಲ್ಲಿ ಎರಡು ಸೂಟ್ ಕೇಸ್ ಪತ್ತೆಯಾಗಿದ್ದವು. ಇದರಲ್ಲಿ ಆಸ್ತಿಗೆ ಸಂಬಂಧಿಸಿದ ಕೆಲ ದಾಖಲೆಗಳು ಪತ್ತೆಯಾಗಿದ್ದು, ಅಶ್ವತ್ತಮ್ಮ, ಅಂಬಿಕಾಪತಿ ಹೆಸರಿನ ದಾಖಲೆ ಪತ್ರಗಳು ಲಭ್ಯವಾಗಿದ್ದವು. ಚಿನ್ನಾಭರಣ, ಎಲ್ಲವನ್ನೂ ಕ್ರೋಢಿಕರಿಸಿ ಲೆಕ್ಕ ಹಾಕಿ ಜಪ್ತಿ ಮಾಡಲಾಗಿದ್ದು, ಎಲ್ಲದರ ದಾಖಲೆ ಪತ್ರಗಳನ್ನ ಪರಿಶೀಲಿಸಿದ್ದಾರೆ.
40 ಕೋಟಿ ಹಣದ ಮೂಲ ಯಾವುದು? ಎಲ್ಲಿಂದ ಹಣ ಬಂತು? ಈ ಹಣ ಯಾರದ್ದು? ಎಲ್ಲಿಗೆ ಸಾಗಾಟ ಮಾಡುವುಕ್ಕೆ ಬಾಕ್ಸ್ಗಳಲ್ಲಿ ತುಂಬಲಾಗಿತ್ತು ಎನ್ನುವ ಆಯಾಮಗಳಲ್ಲಿ ಐಟಿ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ.
ಸದ್ಯ ಪ್ರಮೋದ್, ಪ್ರದೀಪ್ಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಮಂಗಳವಾರ ವಿಚಾರಣೆಗೆ ಬರುವಂತೆ ಐಟಿ ತಂಡ ತಿಳಿಸಿದ್ದು, 40 ಕೋಟಿಗೂ ಅಧಿಕ ಹಣಕ್ಕೆ ಅಂಬಿಕಾ ಪತಿ ಕುಟುಂಬ ಲೆಕ್ಕ ಕೊಡಬೇಕಿದೆ. ಹಣದ ಮೂಲ ಕೆದಕುವುದಕ್ಕೆ ಮುಂದಾಗಿರುವ ಐಟಿ ಅಧಿಕಾರಿಗಳು ಮಂಗಳವಾರದಿಂದ ಅಸಲಿ ತನಿಖೆ ಆರಂಭಿಸಲಿದ್ದಾರೆ.














































































































































































































































































































































































































































































































































































































































































































































































































































































































































































































































































































































