ಬಂಗಾರಪ್ಪ ಚಿಟಿಕೆ ಹೊಡೆಯುವುದರಲ್ಲಿ ಕಾವೇರಿ ಸಮಸ್ಯೆಗೆ ಉತ್ತರ ಕೊಟ್ಟಿದ್ದರು
ರಾಯಚೂರು: ಕಾವೇರಿ ನೀರಿನ ವಿಚಾರದಲ್ಲಿ ಬಂಗಾರಪ್ಪನವರು ( ಮುಖ್ಯಮಂತ್ರಿ ಆಗಿದ್ದಾಗ ಚಿಟಿಕೆ ಹೊಡೆಯುವುದರಲ್ಲಿ ಉತ್ತರ ಕೊಟ್ಟಿದ್ದರು. ಬಂಗಾರಪ್ಪನವರ ಕಾಲದ ಕಾನೂನು ಬೇರೆ, ಈಗ ಬೇರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
Advertisement: 0:55Close Player
ರಾಯಚೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಬಂಗಾರಪ್ಪ ತೆಗೆದುಕೊಂಡ ತೀರ್ಮಾನ ತೆಗೆದುಕೊಂಡರೆ ಅವರ ಜೊತೆ ಇರುತ್ತೇವೆ. ಪ್ರಾಧಿಕಾರ ವಿರುದ್ಧ ಹೋಗಿದ್ದಕ್ಕೆ ಹೈಕೋರ್ಟ್‌ನಲ್ಲಿ ಆಗ ನಮಗೆ ಛೀಮಾರಿ ಹಾಕಿದ್ದರು. ಅಷ್ಟರೊಳಗೆ ನಮ್ಮ ತಂದೆಯವರು ಏನೇನು ಮಾಡಬೇಕೋ ಮಾಡಿ ಮುಗಿಸಿದ್ದರು ಎಂದರು.
ಶಿಕ್ಷಕರ ವರ್ಗಾವಣೆಯಿಂದ ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಸಮಸ್ಯೆಯಾಗಿದೆ. ಖಾಲಿಯಿರುವ ಹುದ್ದೆಗಳಲ್ಲಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಸದ್ಯಕ್ಕೆ ಈ ಭಾಗದಲ್ಲಿ ಅಂತರ್ ವಿಭಾಗಕ್ಕೆ ವರ್ಗಾವಣೆಯಾದ ಶಿಕ್ಷಕರನ್ನು ಅತಿಥಿ ಶಿಕ್ಷಕರು ಬರುವವರೆಗೆ ಬಿಡುಗಡೆ ಮಾಡದಂತೆ ಸೂಚಿಸಲಾಗಿದೆ. ಕೆಲ ಅಧಿಕಾರಿಗಳು ಹಣ ಪಡೆದು ಶಿಕ್ಷಕರನ್ನು ಬಿಡುಗಡೆ ಮಾಡಿರುವ ಆರೋಪ ಹಿನ್ನೆಲೆ ಅಂತಹ ಘಟನೆ ನಡೆದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಖಾಯಂ ಶಿಕ್ಷಕರ ನೇಮಕಾತಿ ಶೀಘ್ರದಲ್ಲೇ ಆಗುತ್ತದೆ. ನ್ಯಾಯಾಲಯದಲ್ಲಿ ಆದಷ್ಟು ಬೇಗ ತೀರ್ಮಾನ ಆಗುತ್ತದೆ ಎಂದರು. ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 8,500 ಕೊಠಡಿಗಳನ್ನು ಕೊಡಬೇಕು ಎಂದು ತೀರ್ಮಾನವಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 25%ರಷ್ಟು ಅನುದಾನ ಶಾಲೆಗಳ ಅಭಿವೃದ್ಧಿಗೆ ಬಳಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.













































































































































































































































































































































































































































































































































































































































































































































































































































































































































































































































































































































