July 27, 2026
#ಜಿಲ್ಲೆ

ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಡೌಟ್ಟಿಕೆಟ್ ರೇಸ್‌ನಲ್ಲಿ ಬ್ರಿಜೇಶ್ ಚೌಟಾ

ಮಂಗಳೂರು:
ಕರಾವಳಿ ಬಿಜೆಪಿಯ ಭದ್ರಕೋಟೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ಹಿಡಿತದಿಂದ ತಪ್ಪಿ ಹಲವು ವರ್ಷಗಳೇ ಕಳೆದಿವೆ. ಸದ್ಯ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನಳಿನ್ ಕುಮಾರ್ ಕಟೀಲ್ ಸಂಸದರಾಗಿರುವ ದಕ್ಷಿಣ ಕನ್ನಡದಲ್ಲಿ ಹೊಸ ಮುಖವನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಬಿಜೆಪಿ ಟಿಕೆಟ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಆದರೆ ಈ ಬಾರಿ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕರಾವಳಿ ಬಿಜೆಪಿ ಕಾರ್ಯಕರ್ತರು ಹಾಗೂ ಸಂಘಟನೆ ಕಾರ್ಯಕರ್ತರು ಕಟೀಲ್ ಮೇಲೆ ಒಲವು ಹೊಂದಿಲ್ಲ. ಕಾರ್ಯಕರ್ತರ ಅಭಿಪ್ರಾಯವನ್ನು ಕಡೆಗಣಿಸಿ ಕಟೀಲ್‌ಗೆ ಟಿಕೆಟ್ ನೀಡಿದರೆ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಾದ ಬಂಡಾಯದ ಬಿಸಿ ಲೋಕಸಭಾ ಚುನಾವಣೆಯಲ್ಲಿ ಮರುಕಳಿಸುವ ಸಾಧ್ಯತೆ ಇದೆ.
ಬಿಜೆಪಿ ಭದ್ರಕೋಟೆಯಲ್ಲಿ ವ್ಯಕ್ತಿಗಿಂತ ಪಕ್ಷದ ಶಕ್ತಿಯೇ ದೊಡ್ಡದು. ಯಾರನ್ನೇ ನಿಲ್ಲಿಸಿದರೂ ಗೆಲುವು ನಿಶ್ಚಿತ ಅನ್ನೋ ವಿಶ್ವಾಸ ಬಿಜೆಪಿ ನಾಯಕರಲ್ಲಿದೆ. ಹೀಗಾಗಿಯೇ ಈ ಬಾರಿ ಅಭ್ಯರ್ಥಿ ಬದಲಾವಣೆ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸಾಕಷ್ಟು ಮುಖಂಡರು ಟಿಕೆಟ್ ಲಾಬಿ ಮಾಡಲಾರಂಭಿಸಿದ್ದಾರೆ. ಬ್ರಿಜೇಶ್ ಚೌಟಾ ಅವರು ಟಿಕೆಟ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಬ್ರಿಜೇಶ್ ಚೌಟಾ ಅವರು ಕಳೆದ ಬಾರಿ ಕೂಡ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಗಿದ್ದರು. ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ ಚೌಟಾ ಅವರು ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಸಂಘ ಪರಿವಾರದ ರಾಷ್ಟ್ರೀಯ ಪ್ರಮುಖರೊಂದಿಗೆ ನಿಖಟ ಸಂಪರ್ಕವೂ ಹೊಂದಿದ್ದಾರೆ. ಇತ್ತ ಕಾರ್ಯಕರ್ತರ ಒಲವು ಇಲ್ಲದಿದ್ದರೂ ನಳಿನ್ ಕುಮಾರ್ ಕಟೀಲ್ ಅವರ ಬೆನ್ನಿಗೆ ಬಿ.ಎಲ್.ಸಂತೋಷ್ ನಿಂತಿದ್ದಾರೆ.
ಬAಡಾಯ ಏಳುತ್ತಾರಾ ಅರುಣ್ ಕುಮಾರ್ ಪುತ್ತಿಲ?
ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಾಯದ ಮೇರೆಗೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಪುತ್ತೂರಿನಲ್ಲಿ ಅರುಣ್ ಕುಮಾರ್ ಸವಾಲಾಗಿದ್ದರು.
ಯಾರೇ ಸ್ಪರ್ಧಿಸಿದರೂ ಪುತ್ತೂರಿನಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎನ್ನುವ ವಿಶ್ವಾಸದಲ್ಲಿದ್ದ ಕರಾವಳಿಯ ನಾಯಕರಿಗೆ ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿದಿದ್ದು ಅಚ್ಚರಿ ತಂದಿತ್ತು. ಅರುಣ್ ಕುಮಾರ್ ಪುತ್ತಿಲ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟು ಅಲ್ಪ ಮತಗಳ ಅಂತರಿದAದ ಅಶೋಕ್ ರೈ ಗೆದ್ದರು.
ಇತ್ತ, ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಲು ಮುಂದಾಗಿರುವ ಹಿಂದೂ ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ಅವರನ್ನು ಲೋಕಸಭಾ ಚುನಾವಣೆಯಲ್ಲೂ ಕಣಕ್ಕಿಳಿಸಲು ಕಸರತ್ತು ನಡೆಸುತ್ತಿದ್ದಾರೆ. ಪುತ್ತಿಲ ಪರಿವಾರ ಸಂಘಟನೆ ಮೂಲಕ ಪುತ್ತಿಲ ಅವರು ಜಿಲ್ಲಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದು, ಕಾರ್ಯಕರ್ತರನ್ನು ಒಗ್ಗೂಡಿಸುತ್ತಿದ್ದಾರೆ. ಈಗಾಗಲೇ ಸ್ಥಳೀಯ ಚುನಾವಣೆಯಲ್ಲೂ ಪುತ್ತಿಲ ಪರಿವಾರದಿಂದ ಅಭ್ಯರ್ಥಿಗಳು ಕಣಕ್ಕಿಳಿದು ಬಿಜೆಪಿ-ಕಾಂಗ್ರೆಸ್ ವಿರುದ್ಧ ಜಯಬೇರಿ ಸಾಧಿಸಿದ್ದಾರೆ.
ಒಂದೊಮ್ಮೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದೇ ಹೋದರೆ ಕಾರ್ಯಕರ್ತರ ಒತ್ತಾಯದ ಮೇರೆಗೆ ಲೋಕಸಭಾ ಚುನಾವಣೆಯಲ್ಲಿ ಬಂಡಾಯದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಅಥವಾ ಮೋದಿಗಾಗಿ ಸೈಲೆಂಟ್ ಆದರೂ ಅಚ್ಚರಿ ಪಡಬೇಕಿಲ್ಲ. ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸುತ್ತಿರುವ ಪುತ್ತಿಲ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುತ್ತೋ ಅಥವಾ ಬ್ರಿಜೇಶ್ ಚೌಟಾ ಅವರಿಗೆ ಮಣೆ ಹಾಕುತ್ತೋ ಅಥವಾ ಯಾರೂ ಊಹಿಸದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೋ ಕಾದುನೋಡಬೇಕಿದೆ.

Leave a comment

Your email address will not be published. Required fields are marked *