ಬಿಜೆಪಿಯವ್ರು ಪಕ್ಷಕ್ಕೆ ಬರುವಾಗ ಜಾಮೂನು ಕೊಡ್ತಾರೆ, ಅಧಿಕಾರ ಮುಗಿದಾಗ ವಿಷ ಕೊಡ್ತಾರೆ
ಮೈಸೂರು: ಬಿಜೆಪಿಯವರು ಪಕ್ಷಕ್ಕೆ ಬರುವಾಗ ಜಾಮೂನು ಕೊಡುತ್ತಾರೆ. ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ ಎಂದು ಸ್ವಪಕ್ಷದ ವಿರುದ್ಧವೇ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಿಡಿಕಾರಿದರು.
ನಗರದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ನಲ್ಲಿದ್ದವನು. ಅವರಾಗೆ ಪಕ್ಷಕ್ಕೆ ಸೇರಿಸಿಕೊಂಡರು. ಈಗ ಎಸ್.ಟಿ.ಸೋಮಶೇಖರ್ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ. ನನ್ನನ್ನ ಪಕ್ಷ ಬಿಡಿಸಲು ರೆಡಿಯಾಗಿದ್ದಾರೆ. ನಾನು ಕ್ಷೇತ್ರದ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ, ಡಿಸಿಎಂ ಹತ್ತಿರ ಹೋಗುತ್ತೇನೆ. ಇದರಲ್ಲಿ ತಪ್ಪೇನಿದೆ? ಜೊತೆಗೆ ನಾನು ಸಿಎಂ, ಡಿಸಿಎಂ ಹೊಗಳುವುದನ್ನು ಸಹಿಸುತ್ತಿಲ್ಲ. ನನ್ನ ಕಚೇರಿಯಿಂದ ಕಾಂಗ್ರೆಸ್ ಗ್ಯಾರಂಟಿಯಿಂದ ಫಾಲೋಅಪ್ ಮಾಡಿದ್ದೇನೆ. ಇದರಿಂದ ನನ್ನ ಕ್ಷೇತ್ರದ ಜನರಿಗೆ ಅನುಕೂಲವಾಗಿದೆ. ಆದರೆ ಬಿಜೆಪಿಯವರು ಅದೆಲ್ಲ ಕಾಂಗ್ರೆಸ್ ಗ್ಯಾರಂಟಿ, ಅದನ್ನ ನೀವೇಕೆ ಉತ್ತೇಜನ ನೀಡುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಅರೇ, ಸರ್ಕಾರ ಯಾವುದಾದರೂ ಇರಲಿ. ಜನಕ್ಕೆ ಒಳ್ಳೆಯದು ಮಾಡುವುದು ಬೇಡವ ಎಂದು ಪ್ರಶ್ನಿಸಿದರು.
ಈಶ್ವರಪ್ಪನಿಗೆ ಯಾವುದೇ ಬೆಲೆ ಇಲ್ಲ. ಬೆಲೆ ಇಲ್ಲದವರ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಪಕ್ಷದಿಂದ ಬಿಟ್ಟುಹೋಗು ಅಂತ ಹೇಳಲು ಈಶ್ವರಪ್ಪ ಯಾರು? ಈಶ್ವರಪ್ಪ ಏನು ರಾಜ್ಯಾಧ್ಯಕ್ಷನ? ಈಶ್ವರಪ್ಪ ನಂಬಿ ಪಕ್ಷಕ್ಕೆ ಬರಲಿಲ್ಲ. ನಾನು ಯಡಿಯೂರಪ್ಪ ನಂಬಿ ಪಕ್ಷಕ್ಕೆ ಬಂದಿದ್ದೇನೆ. ಇದೆಲ್ಲ ಬೆಳವಣಿಗೆಯಾದ ಮೇಲೆ ನಾನು ಯಡಿಯೂರಪ್ಪ ಜೊತೆ ಮಾತನಾಡಿದ್ದೇನೆ. ಅವರು ಯಾವುದೇ ಕಾರಣಕ್ಕೆ ಪಕ್ಷ ಬಿಡಬೇಡ ಎಂದು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲಿದ್ದೇನೆ. ಈಗ ಯಾರೋ 5 ಜನರು ಮಾತನಾಡುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಎಸ್.ಟಿ.ಸೋಮಶೇಖರ್ ಬೆಂಬಲಿಗರು ಮಾತ್ರ ಪಕ್ಷ ಬಿಟ್ಟಿಲ್ಲ. ಅಶೋಕ್ ಕ್ಷೇತ್ರದಲ್ಲಿ ಹೋಗಿಲ್ಲವ? ಮುನಿರತ್ನ ಕ್ಷೇತ್ರದಲ್ಲಿ ಹೋಗಿಲ್ಲವ? ದಾಸರಹಳ್ಳಿ, ಕೆ.ಆರ್.ಪುರಂ ಕ್ಷೇತ್ರದಲ್ಲಿ ಹೋಗಿಲ್ಲ. ಕೇವಲ ನನ್ನನ್ನೆ ಏಕೆ ಟಾರ್ಗೆಟ್ ಮಾಡುತ್ತಿರಾ? ಕ್ಷೇತ್ರದಲ್ಲಿ ಸಾವಿರ ಜನ ಲೀಡರ್ ಇರುತ್ತಾರೆ. ಚುನಾವಣೆ ಸಂಧರ್ಭದಲ್ಲಿ ಆ ಕಡೆ ಈ ಕಡೆ ಹೋಗುತ್ತಾರೆ. ಇದಕ್ಕೆ ಮಹತ್ವ ಬೇಡ ಎಂದು ತಿಳಿಸಿದರು.
ನಾನು ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ. ನಾನು ಮಾನಸಿಕ, ದೈಹಿಕವಾಗಿ ಪಕ್ಷದಲ್ಲೆ ಇದ್ದೇನೆ. ಕಾಂಗ್ರೆಸ್ ಸೇರುತ್ತಾರೆ ಎಂಬುದ್ದೆಲ್ಲ ಊಹಾಪೋಹ. ನಾನು ಯಡಿಯೂರಪ್ಪ ಮಾತು ನಂಬಿ ಬಿಜೆಪಿಯಲ್ಲಿದ್ದೇನೆ. ಆದರೆ ಇವರೇ ಪಕ್ಷದಿಂದ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದವರೆ ನನ್ನ ವಿರುದ್ಧ ಕೆಲಸ ಮಾಡಿದರು. ಈ ಬಗ್ಗೆ ದಾಖಲೆ ಸಮೇತ ದೂರು ಕೊಟ್ಟೆ. ಆದರೆ ಪ್ರಯೋಜನವಾಗಲಿಲ್ಲ. ಅವರ ಹುಟ್ಟಹಬ್ಬವನ್ನೇ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಮಾಡಿದರು. ಇದೆಲ್ಲ ಏನ್ ಅರ್ಥ? ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ನನ್ನನ್ನು ಯಡಿಯೂರಪ್ಪ ಉಳಿಸಿಕೊಂಡರು. ಯಡಿಯೂರಪ್ಪನವರ ವಿರುದ್ಧ ಐದಾರು ಜನರು ಮಾತನಾಡಿದರು. ಅವರ ವಿರುದ್ಧ ಪಕ್ಷದಲ್ಲಿ ಕ್ರಮ ತೆಗೆದುಕೊಳ್ಳಲಿಲ್ಲ. ಇದು ಕೂಡ ಪಕ್ಷದ ಹಿನ್ನೆಡೆಗೆ ಕಾರಣ ಅಸಮಾಧಾನ ಹೊರಹಾಕಿದರು.
ಬಿಜೆಪಿ ಬರ ಅಧ್ಯಯನಕ್ಕೆ ವಿರೋಧ
ನಿಮ್ಮದೇ ಕೇಂದ್ರ ಸರ್ಕಾರ ಇದೆ. ನೀವು ಕೇಂದ್ರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಿ ಎಂದು ಬಿಜೆಪಿ ಬರ ಅಧ್ಯಯನಕ್ಕೆ ಸ್ವಪಕ್ಷದವರೇ ಆದ ಶಾಸಕ ಎಸ್.ಟಿ.ಸೋಮಶೇಖರ್ ವಿರೋಧ ವ್ಯಕ್ತಪಡಿಸಿದರು.
ಅಧಿಕಾರಿಗಳು ಬರಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಿ ಹೋಗಿದ್ದಾರೆ. ನೀವು ಕೇಂದ್ರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಿ. ಅದನ್ನು ಬಿಟ್ಟು ಇಲ್ಲಿ ಪ್ರವಾಸ ಮಾಡಿದರೆ ಏನು ಪ್ರಯೋಜನ? ನಿಮ್ಮ ಬರ ಅಧ್ಯಯನ ಪ್ರವಾಸದಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಟೀಕಿಸಿದರು.









































































































































































































































































































































































































































































































































































































































































































































































































































































































































































































































































































































