ಚುನಾವಣಾ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ ಮಾಜಿ ಸಚಿವ
ವಿಜಯನಗರ: ಮಾಜಿ ಸಚಿವ ಆನಂದ್ ಸಿಂಗ್ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆನಂದ್ ಸಿಂಗ್, ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಆದ್ರೆ ನಾನು ಬಿಜೆಪಿ ಕಾರ್ಯಕರ್ತನಾಗಿಯೇ ಮುಂದುವರಿಯುತ್ತೇನೆ. ಪಕ್ಷದ ಹೇಳಿದವರ ಪರವಾಗಿ ಮುಂದಿನ ದಿನಗಳಲ್ಲಿ ಕೆಲಸ ಮಾಡುವೆ. ಬಿಜೆಪಿ ಹೇಳದೇ ಇದ್ರೂ ನಾನು ಪಕ್ಷದ ವ್ಯಕ್ತಿಯೇ ಎಂದರು.
ಬಿಜೆಪಿಯವರು ಹೇಳಲಿ, ಬಿಡಲಿ, ನಾನು ಪಕ್ಷದಲ್ಲಿಯೇ ಮುಂದುವರಿಯುತ್ತೇನೆ. ಪಕ್ಷ ಇಂಥವರ ಪರ ಕೆಲಸ ಮಾಡು ಅಂದ್ರೆ ನಾನು ಮಾಡುತ್ತೇನೆಯೇ ಹೊರತು ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಚುನಾವಣಾ ರಾಜಕೀಯದಿಂದ ದೂರ ಸರಿಯುತ್ತಿರೋದನ್ನು ಖಚಿತಪಡಿಸಿದರು.
ಬಳ್ಳಾರಿ ಭಾಗದ ಪ್ರಮುಖ ನಾಯಕ
ಮಾಜಿ ಸಚಿವ ಶ್ರೀರಾಮುಲು ಅವರಂತೆ ಆನಂದ್ ಸಿಂಗ್ ಸಹ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಪ್ರಮುಖ ನಾಯಕರು. 2018ರಲ್ಲಿ ಬಿಜೆಪಿ ಸೇರಿದ್ದ ಆನಂದ್ ಸಿಂಗ್, ಮೈತ್ರಿ ಸರ್ಕಾರದಿಂದ ಹೊರ ಬಂದು ಮತ್ತೆ ಕಮಲ ಬಾವುಟ ಹಿಡಿದಿದ್ದರು.
ನಂತರ ಉಪ ಚುನಾವಣೆಯಲ್ಲಿಯೂ ಗೆದ್ದು, ಹೊಸಪೇಟೆ ಭಾಗದ ಜನರ ಪ್ರತ್ಯೇಕ ಜಿಲ್ಲೆಯ ಕನಸನ್ನು ನನಸು ಮಾಡಿದ್ದರು. ಆನಂದ್ ಸಿಂಗ್ ಸತತ ಪರಿಶ್ರಮದಿಂದ ಬಳ್ಳಾರಿ ಇಬ್ಭಾಗವಾಗಿ ವಿಜಯನಗರ ಜಿಲ್ಲೆ ಸ್ಥಾಪನೆ ಮಾಡಿದ್ದರು
ಐದು ಬಾರಿ ಚುನಾವಣೆಯಲ್ಲಿ ಗೆಲುವು
ಒಂದು ಉಪ ಚುನಾವಣೆ ಸೇರಿದಂತೆ ಹೊಸಪೇಟೆಯಿಂದ ನಾಲ್ಕು ಬಾರಿ ಶಾಸಕರಾಗಿ ಆನಂದ್ ಸಿಂಗ್ ಆಯ್ಕೆಯಾಗಿದ್ದಾರೆ. 2023ರ ಚುನಾವಣೆಯಲ್ಲಿ ಪುತ್ರ ಸಿದ್ದಾರ್ಥ್ ಸಿಂಗ್ಗೆ (Siddharth Singh) ಟಿಕೆಟ್ ಕೊಡಿಸಿ ತಾವು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಮಗನನ್ನು ಶಾಸಕನಾಗಿ ಮಾಡಿ, ತಾವು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡೋ ಪ್ಲಾನ್ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಲೋಕಸಭಾ ಚುನಾವಣೆಗೆ ಸ್ಪರ್ಧೆ ಇಲ್ಲ
ಆದ್ರೆ ವಿಧಾನಸಭಾ ಚುನಾವಣೆಯಲ್ಲಿ ಪುತ್ರನನ್ನು ಹೊಸಪೇಟೆಯ ಜನರು ಕೈ ಹಿಡಿಯಲಿಲ್ಲ. ಇದೀಗ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸುದ್ದಿಗಳನ್ನು ಆನಂದ್ ಸಿಂಗ್ ತಳ್ಳಿ ಹಾಕಿ, ಚುನಾವಣಾ ರಾಜಕೀಯ ನಿವೃತ್ತಿ ಹೇಳಿದ್ದಾರೆ.













































































































































































































































































































































































































































































































































































































































































































































































































































































































































































































































































































































