ಬೆಂಗಳೂರು: ಬಿಜೆಪಿಯಲ್ಲಿ ಒಂದು ಕಡೆ ಜೆಡಿಎಸ್ ಜೊತೆಗಿನ ದೋಸ್ತಿ ಜೋರಾದ್ರೆ, ಮತ್ತೊಂದು ಕಡೆ ಅತೃಪ್ತರ ಬಣದ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ ನೇಮಕದಿಂದ ಅಸಮಧಾನಗೊಂಡಿರುವ ನಾಯಕರು ತಮ್ಮದೇ ಹೊಸ ತಂಡ ಕಟ್ಟಿಕೊಳ್ಳುವಂತೆ ಕಾಣಿಸುತ್ತಿದೆ. ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣ, ಸಿಪಿ ಯೋಗೇಶ್ವರ್ ಸೇರಿದಂತೆ ಹಲವರ ತಂಡದ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್ ತೊರೆದಿರುವ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ವಿ.ಸೋಮಣ್ಣ ಭೇಟಿಯಾಗಿ ಮಾತುಕತೆ ನಡೆಸಿರೋದು ತೀವ್ರ ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ತೊರೆದಿದ್ದ ರೋಷನ್ ಬೇಗ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಚುನಾವಣೆಯನ್ನು ರೋಷನ್ ಬೇಗ್ ಟಿಕೆಟ್ ತಪ್ಪಿತ್ತು. ತಮ್ಮನ್ನು ಪರಿಗಣಿಸದೇ ಇರೋದಕ್ಕೆ ರೋಷನ್ ಬೇಗ್ ಬೇಸರಗೊಂಡಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬೇಸರಗೊಂಡಿರುವ ರೋಷನ್ ಬೇಗ್ ಭೇಟಿ ಮಾಡಿರುವ ವಿ.ಸೋಮಣ್ಣ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅತೃಪ್ತ ಬಣದ ನಾಯಕರ ಚರ್ಚೆ ಏನು?
ಈ ಹಿಂದೆ ಸೋಮಣ್ಣ ಮತ್ತು ಯತ್ನಾಳ್ ನಡುವೆ ಎಲ್ಲಿ ಸರಿ ಇರಲಿಲ್ಲ. ವಿಜಯೇಂದ್ರ ನೇಮಕದ ಬಳಿಕ ಸೋಮಣ್ಣ ಮತ್ತು ಯತ್ನಾಳ್ ಇಬ್ಬರು ಒಟ್ಟಾಗಿದ್ದಾರೆ. ಪಕ್ಷದಲ್ಲಿ ವಿಜಯೇಂದ್ರ, ಯಡಿಯೂರಪ್ಪ ಶಕ್ತಿ ಮೇಲುಗೈ ಆದರೆ ಮುಂದೆ ತಮ್ಮ ಕಥೆ ಏನೆಂದು ಅತೃಪ್ತ ಬಣದ ನಾಯಕರು ಚರ್ಚೆ ನಡೆಸುತ್ತಿದ್ದಾರಂತೆ.
ವರಿಷ್ಠರ ಭೇಟಿಗೆ ಚಿಂತನೆ
ಅತೃಪ್ತ ನಾಯಕರೆಲ್ಲಾ ಒಂದಾಗಿ ವರಿಷ್ಠರನ್ನು ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ದೂರು ನೀಡಲು ಪ್ಲಾನ್ ಮಾಡಿಕೊಂಡಿದ್ದಾರಂತೆ.
ಈ ವೇಳೆ ಯಡಿಯೂರಪ್ಪರಿಂದ ಆಗಿರುವ ಅನ್ಯಾಯ, ವಿಜಯೇಂದ್ರ ತಮ್ಮ ವಿರುದ್ಧ ಮಾಡಿದ್ದ ತಂತ್ರಗಳು, ಪಕ್ಷದಲ್ಲಿ ಅಧ್ಯಕ್ಷರಾದ ಬಳಿಕ ಹಿರಿಯರ ವಿಷಯದಲ್ಲಿ ವಿಜಯೇಂದ್ರ ನಡೆ ಬಗ್ಗೆ ವರಿಷ್ಠರ ಗಮನಕ್ಕೆ ತರಲು ಅತೃಪ್ತ ನಾಯಕರು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಟಸ್ಥವಾಗಿ ಉಳಿಯಲು ನಿರ್ಧಾರ
ವರಿಷ್ಠರ ಏನು ಸೂಚನೆ ಕೊಡ್ತಾರೋ ಅದರ ಪ್ರಕಾರ ಮುಂದಿನ ಹೆಜ್ಜೆ ಇರಿಡಲು ಚಿಂತನೆ ನಡೆಸಿದ್ದಾರಂತೆ. ಲೋಕಸಭಾ ಚುನಾವಣೆವರೆಗೂ ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.









































































































































































































































































































































































































































































































































































































































































































































































































































































































































































































































































































































