ನಮ್ಮಲ್ಲಿ ಅಸಮಾಧಾನ ಎಲ್ಲಿದೆ : ಡಿಕೆಶಿ ಪ್ರಶ್ನೆ
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ನಮ್ಮಲ್ಲಿ ಅಸಮಾಧಾನ ಎಲ್ಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ (BJP) ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಆಗುತ್ತಿಲ್ಲ. ದೇಶದ, ರಾಜ್ಯದ ಇತಿಹಾಸದಲ್ಲಿ ಸರ್ಕಾರ ರಚನೆ ಆಗಿ ಐದು ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡುವ ಸಾಮರ್ಥ್ಯ ಇಲ್ಲ ಎಂದು ಟೀಕಿಸಿದರು.
ಮೂರ್ನಾಲ್ಕು ದಿನಗಳಲ್ಲಿ ಲೋಕಸಭಾ ಚುನಾವಣೆಯ (Lok Sabha Election) ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ದವಾಗಲಿದೆ. ಈಗಾಗಲೇ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿತ್ತು. ವೀಕ್ಷಕರು ಕಾರ್ಯಕರ್ತರನ್ನು ಭೇಟಿಯಾಗಿ ಬಂದಿದ್ದಾರೆ. ಅವರೆಲ್ಲರೂ ಈಗಾಗಲೇ ಅಭ್ಯರ್ಥಿಗಳ ವರದಿ ಸಿದ್ದ ಮಾಡಿಕೊಂಡಿದ್ದಾರೆ. ಅವರು ಇನ್ನೂ ವರದಿಯನ್ನು ಕೊಟ್ಟಿಲ್ಲ. ನಮ್ಮ ವರಿಷ್ಠರು ಸಹ ಕೆಲವು ಸಲಹೆ ನೀಡಿದ್ದಾರೆ ಎಂದರು.
ಬಿಜೆಪಿಯವರ ಬರ ಅಧ್ಯಯನ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಬರ ಸಮೀಕ್ಷೆ ಮಾಡಿ ದೆಹಲಿಗೆ ಹೋಗಿ ವರದಿ ಕೊಡಲಿ. ನಮ್ಮಲ್ಲಿ ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ ತಂಡ ಬರ ಅಧ್ಯಯನ ಮಾಡಿದೆ. ಎಲ್ಲಾ ಜಿಲ್ಲೆಗಳಿಗೆ ಹೋಗಿ ಅಧ್ಯಯನ ಮಾಡಿ, 175 ತಾಲೂಕಗಳನ್ನು ಬರ ಎಂದು ಘೋಷಣೆ ಮಾಡಿದೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿ ಖಾತೆಯಲ್ಲಿ ಒಂದು ಸಾವಿರ ಕೋಟಿ ರೂ. ಹೆಚ್ಚು ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕಕ್ಕೆ 50 ವರ್ಷ ಎಲ್ಲರಿಗೂ ಇದೊಂದು ಸುವರ್ಣಾವಕಾಶ ಇಡೀ ವರ್ಷ ಹಬ್ಬದ ಆಚರಣೆಗೆ ತೀರ್ಮಾನ ಮಾಡಿದ್ದೇವೆ. ವಿಜಯನಗರ ನಾಡು ಹಂಪಿಯಿಂದ ಜ್ಯೋತಿ ಶುರುವಾಗಿದೆ. ಗುರುವಾರ ರಾತ್ರಿ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಮುಂದಿನ ಭಾಗವಾಗಿ ಇವತ್ತು ಗದಗ್‌ನಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಈಗಾಗಲೇ ಮುಖ್ಯಮಂತ್ರಿಗಳು ಭುವನೇಶ್ವರಿ ಭವನವನ್ನು ಕಟ್ಟಿಸಲು ತೀರ್ಮಾನ ಮಾಡಿದ್ದಾರೆ.ಇವತ್ತು 10 ಜನ ಮಂತ್ರಿಗಳು ಗದಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ಹೇಳಿದರು.













































































































































































































































































































































































































































































































































































































































































































































































































































































































































































































































































































































