July 29, 2026
#ರಾಷ್ಟ್ರೀಯ

ಕುಡಿದ ಅಮಲಿನಲ್ಲಿ ಪೊಲೀಸ್ ಠಾಣೆಯಲ್ಲಿ ದುರ್ವರ್ತನೆ: ‘ಜೈಲರ್’ ನಟನ ಬಂಧನ

ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿರುವ ರಜನೀಕಾಂತ್  ನಟನೆಯ ‘ಜೈಲರ್’ ಸಿನಿಮಾದ ವಿಲನ್ ವಿನಾಯಗನ್ ನಿಜ ಜೀವನದಲ್ಲಿಯೂ ವಿಲನ್ ಪ್ರವೃತ್ತಿ ತೋರಿಸಿ ಪೊಲೀಸರ ಅತಿಥಿಯಾಗಿದ್ದಾರೆ. ಕುಡಿದು ಪೊಲೀಸ್ ಠಾಣೆಗೆ ಬಂದಿದ್ದು ಮಾತ್ರವಲ್ಲದೆ ಠಾಣೆಯಲ್ಲಿ ದುರ್ವರ್ತನೆ ತೋರಿರುವ ವಿನಾಯಗನ್ ಅನ್ನು ಕೇರಳದ ಉತ್ತರ ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ.

ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ವಿನಾಯಕನ್ ವಿರುದ್ಧ ದೂರೊಂದು ದಾಖಲಾಗಿತ್ತು. ವಿನಾಯಗನ್ ವಾಸವಿರುವ ಅಪಾರ್ಟ್​ಮೆಂಟ್​ನವರು ಅತಿಯಾದ ಶಬ್ದ, ಲೇಟ್ ನೈಟ್ ಪಾರ್ಟಿಗಳು ಮಾಡುತ್ತಿದ್ದ ವಿನಯ್ ವಿರುದ್ಧ ದೂರು ನೀಡಿದ್ದರು. ಇದೇ ಕಾರಣಕ್ಕೆ ವಿನಾಯಗನ್ ಅವರಿಗೆ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು.

ಇಂದು ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆ ಪ್ರವೇಶಿಸಿದ ನಟ ವಿನಾಯಗನ್, ಠಾಣೆಯಲ್ಲಿ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದ ಹಾಗೂ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡಿದ್ದು ಮಾತ್ರವೇ ಅಲ್ಲದೆ ಅವಾಚ್ಯ ಶಬ್ದಗಳಿಂದಲೂ ನಿಂದಿಸಿದರು ಎಂದು ಪೊಲೀಸರು ಆರೋಪಿಸಿದ್ದು, ವಿನಾಯಗನ್ ವಿರುದ್ಧ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಿದ ಪೊಲೀಸರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆಗಳನ್ನು ಮಾಡಿಸಿದ್ದಾರೆ.

ಸಾಧಾರಣ ಟಿ-ಶರ್ಟ್-ನಿಕ್ಕರ್ ಧರಿಸಿದ ವಿನಾಯಗನ್ ಅವರನ್ನು ಪೊಲೀಸ್ ಠಾಣೆಯ ಮೂಲೆಯೊಂದರಲ್ಲಿ ನಿಲ್ಲಿಸಿರುವ ಚಿತ್ರ ಹಾಗೂ ವಿನಾಯಗನ್ ಅವರನ್ನು ಆಟೋನಲ್ಲಿ ಕರೆದುಕೊಂಡು ಹೋಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿನಾಯಗನ್ ಅವರು ಸೈಡ್ ಡ್ಯಾನ್ಸರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಈಗ ಪ್ರಮುಖ ವಿಲನ್ ಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದಾರೆ. ದುಲ್ಕರ್ ಸಲ್ಮಾನ್ ಜೊತೆಗೆ ನಟಿಸಿದ್ದ ‘ಕಪಾಟಿಪದಂ’ ಸಿನಿಮಾ ವಿನಾಯಗನ್​ಗೆ ದೊಡ್ಡ ಜನಪ್ರಿಯತೆ ಗಳಿಸಿಕೊಟ್ಟಿತು. ಅದಾದ ಬಳಿಕ ಹಲವು ಸಿನಿಮಾಗಳಲ್ಲಿ ವಿನಾಯಗನ್ ವಿಲನ್ ಆಗಿ ನಟಿಸಿದ್ದರು. ಇತ್ತೀಚೆಗೆ ‘ಜೈಲರ್’ ಸಿನಿಮಾದ ವರ್ಮಾ ಪಾತ್ರಕ್ಕೂ ವಿನಾಯಗನ್​ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಬಿಡುಗಡೆಗೆ ಸಜ್ಜಾಗಿರುವ ಚಿಯಾನ್ ವಿಕ್ರಂ ನಟಿಸಿರುವ ‘ಧ್ರುವ ನಚ್ಚತ್ತಿರಂ’ ಸಿನಿಮಾದಲ್ಲಿಯೂ ವಿನಾಯಗನ್ ನಟಿಸಿದ್ದಾರೆ. ಮಲಯಾಳಂನಲ್ಲಿ ‘ಕರಿಂತಾಂಧಾನ್’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

Leave a comment

Your email address will not be published. Required fields are marked *