ಅಯೋಧ್ಯೆಯಲ್ಲಿ ತಲೆಯೆತ್ತಲಿದೆ ಕರ್ನಾಟಕ ಯಾತ್ರಿ ನಿವಾಸ
ಬೆಂಗಳೂರು:
ಇಡೀ ರಾಷ್ಟ್ರವೇ ರಾಮನೂರಿನಲ್ಲಿ ರಾಮನ ಮಂದಿರಕ್ಕಾಗಿ ಕಾಯುತ್ತಿದೆ. ಆ ಕ್ಷಣಗಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ. ಈ ಸಂದರ್ಭದಲ್ಲಿ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಜನರಿಗೆ ಗುಡ್ ನ್ಯೂಸ್ ಒಂದನ್ನು ಕೊಡಲು ಮುಂದಾಗಿದೆ.
ಹೌದು. ಕರ್ನಾಟಕದ ಮುಜರಾಯಿ ಇಲಾಖೆ ರಾಮನೂರು ಅಯೋಧ್ಯೆಯಲ್ಲಿ ಕನ್ನಡಿಗರಿಗಾಗಿ ಒಂದು ಗುಡ್ ನ್ಯೂಸ್ ಕೊಡಲು ಮುಂದಾಗಿದೆ. ಇನ್ನೇನು ಕೆಲ ದಿನಗಳಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದೆ. ಇದಕ್ಕೂ ಮೊದಲೇ ಉತ್ತರಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ. ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಮಭಕ್ತರು ಅಯ್ಯೋಧ್ಯೆಗೆ ಬರುತ್ತಾರೆ. ಅವರಿಗಾಗಿ ವಸತಿ, ಊಟದ ವ್ಯವಸ್ಥೆಗಾಗಿ ಅತಿಥಿ ಗೃಹ ನಿರ್ಮಾಣ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿದೆ.
ಸರಯೂ ನದಿ ಸಮೀಪದಲ್ಲಿ ಅತಿಥಿ ಗೃಹ ನಿರ್ಮಿಸುವಂತೆ 2023ರ ಆಗಸ್ಟ್ ತಿಂಗಳಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಸಹ ಪತ್ರವನ್ನ ಬರೆದು ಮನವಿ ಮಾಡಿದ್ರು. 2020ರಲ್ಲಿ ಯುಪಿ ಸಿಎಂಗೆ ಯಡಿಯೂರಪ್ಪ ಕೂಡ ಪತ್ರ ಬರೆದು ಮನವಿ ಮಾಡಿದ್ರು. ಇನ್ನು ಈಗ ರಾಜ್ಯದ ಮನವಿಗೆ ಯುಪಿ ಸರ್ಕಾರದ ಹೌಸಿಂಗ್ ಬೋರ್ಡ್ ಪ್ರತಿಕ್ರಿಯೆ ಪತ್ರ ಕಳುಹಿಸಿದೆ. ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹ ನಿರ್ಮಾಣಕ್ಕೆ ಬೇಕಾದ ಪೂರ್ವ ತಯಾರಿಯನ್ನ ಮುಜರಾಯಿ ಇಲಾಖೆ ಮಾಡುತ್ತಿದೆ. ಈ ಮೂಲಕ ರಾಜ್ಯದ ಪ್ರವಾಸಿಗರಿಗೆ ವಾಸ್ತವ್ಯ ಹೂಡಲು ತೊಂದರೆ ಆಗದಂತೆ ಕ್ರಮಕ್ಕೆ ಮುಂದಾಗಿದೆ ಅಂತ ತಿಳಿಸಿದೆ.
ಒಟ್ಟಾರೆ ಅಯೋಧ್ಯೆಗೆ ರಾಮನ ದರ್ಶನಕ್ಕೆ ಹೋಗುವ ಕನ್ನಡಿಗರಿಗೆ ಅನುಕೂಲವಾಗುವಂತೆ ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿರೋದು ಖುಷಿ ವಿಚಾರ. ರಾಮಮಂದಿರದ ಬಳಿ ಸರಯೂ ನದಿಯ ಸಮೀಪದಲ್ಲೇ ನಮ್ಮ ಕರ್ನಾಟಕ ಅತಿಥಿ ಗೃಹ ನಿರ್ಮಾಣವಾಗಿ, ಆದಷ್ಟು ಬೇಗ ಕನ್ನಡಿಗರಿಗೆ ಸಿಗುವಂತಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.








































































































































































































































































































































































































































































































































































































































































































































































































































































































































































































































































































































