ಗೃಹಲಕ್ಷ್ಮಿ ಯೋಜನೆ ಸಮಸ್ಯೆ ನಿವಾರಣೆಗೆ ಗ್ರಾಮ ಮಟ್ಟದಲ್ಲಿ ಕ್ಯಾಂಪ್ ಆಯೋಜನೆ
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿರೋ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗಿದೆ. ಸಮಸ್ಯೆ ನಿವಾರಣೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ ಆಯೋಜಸಲು ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 27 ರಿಂದ 29ರ ವರೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ ಆಯೋಜನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಲಾಗಿದೆ. ಪಿಡಿಓಗಳ ನೇತೃತ್ವದಲ್ಲಿ ಕ್ಯಾಂಪ್ ಆಯೋಜನೆ ಆಗಲಿದ್ದು, ಈ ಕ್ಯಾಂಪ್ ನಲ್ಲಿ ಫಲಾನುಭವಿಗಳಿಗೆ ಇರುವ ಸಮಸ್ಯೆ ಸರಿಪಡಿಸಲು ಸೂಚನೆ ನೀಡಲಾಗಿದೆ.
ಗೃಹಲಕ್ಷ್ಮಿ ಕ್ಯಾಂಪ್ ಹೇಗೆ!?: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಕ್ಯಾಂಪ್ಗಳನ್ನು ಅಯೋಜಿಸತಕ್ಕದ್ದು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಮತ್ತು ಬ್ಯಾಂಕ್ ಸಂಬಂಧಿಸಿದ ಸಮಸ್ಯೆಗಳನ್ನು ಈ ಕ್ಯಾಂಪ್ಗಳಲ್ಲಿ ಪರಿಹರಿಸತಕ್ಕದ್ದು. ಸ್ಥಳೀಯ ಬಾಪೂಜಿ ಸೇವಾ ಕೇಂದ್ರದ ಗಣಕ ಯಂತ್ರ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು ಮತ್ತು Electronic Delivery of Citizen Services (EDCS) ತಂಡಗಳು ಈ ಕ್ಯಾಂಪ್ಗಳಲ್ಲಿ ಭಾಗವಹಿಸತಕ್ಕದ್ದು.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಪ್ರತಿನಿಧಿಗಳು ಮತ್ತು ಇತರ ಬ್ಯಾಂಕ್ಗಳ ಪ್ರತಿನಿಧಿಗಳು ಈ ಕ್ಯಾಂಪ್ಗಳಲ್ಲಿ ಭಾಗವಹಿಸತಕ್ಕದ್ದು. ಕ್ಯಾಂಪ್ಗಳಲ್ಲಿ ಫಲಾನುಭವಿಗಳಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸತಕ್ಕದ್ದು, ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡುವುದು. ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಆಧಾರ್ ಜೋಡಣೆ ಮಾಡುವುದು. ಇ-ಕೆವೈಸಿ ಅಪ್ಡೇಟ್ ಮಾಡುವುದು. ಗೃಹಲಕ್ಷ್ಮಿ ಅರ್ಜಿಯ ಸ್ಥಿತಿ ಪರಿಶೀಲಿಸುವುದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸುವುದು ಇದರ ಉದ್ದೇಶ ಆಗಿದೆ.
ಕ್ಯಾಂಪ್ಗಳನ್ನು ಆಯೋಜಿಸುವ ಕುರಿತು ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ಆಯೋಜಿಸಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಿಸೆಂಬರ್ 27 ರಿಂದ 29ರವರೆಗೆ ಪ್ರತಿದಿನ ಬೆಳಗ್ಗೆ 9.00 ರಿಂದ ಸಂಜೆ 5.00 ಗಂಟೆಯವರೆಗೆ ಕ್ಯಾಂಪ್ಗಳನ್ನು ಆಯೋಜಿಸುವುದು. ಕ್ಯಾಂಪ್ ಆಯೋಜಿಸುವ ಕುರಿತು ಫಲಾನುಭವಿಗಳಿಗೆ EDCS ರವರು SMS ಮೂಲಕ ಮಾಹಿತಿ ನೀಡುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕ್ಷೇತ್ರಮಟ್ಟದ ಸಿಬ್ಬಂದಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮಾಹಿತಿ ನೀಡಿ, ಅವರನ್ನು ಕ್ಯಾಂಪ್ಗಳಿಗೆ ಕರೆತರುವ ಜವಾಬ್ದಾರಿ ನಿರ್ವಹಿಸುವುದು. ಕ್ಯಾಂಪ್ ಆಯೋಜಿಸುವ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪತ್ರಿಕೆ, ಮತ್ತು ಇತರ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.













































































































































































































































































































































































































































































































































































































































































































































































































































































































































































































































































































































