October 28, 2026
#ಜಿಲ್ಲೆ

ಮಂಗಳೂರು, ಉಡುಪಿಯಲ್ಲಿ ಬಂದ್‌ಗೆ ಬೆಂಬಲವೇ ಇಲ್ಲ

ಮಂಗಳೂರು: ಕಾವೇರಿ ನದಿ ನೀರಿಗಾಗಿ ಇಂದು ರೈತಪರ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬೆಂಗಳೂರು ಸೇರಿದಂತೆ ಹತ್ತಾರು ಜಿಲ್ಲೆಗಳಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ.


ಆದರೆ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಎಂದಿನಂತೆ ಈ ಬಾರಿಯೂ ಬಂದ್‌ಗೆ ಕನಿಷ್ಠ ಬೆಂಬಲವೂ ಸಿಕ್ಕಿಲ್ಲ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಜನಜೀವನ ಎಂದಿನಂತೆ ನಡೆಯುತ್ತಿದ್ದು, ಅಂಗಡಿ ಮುಂಗಟ್ಟುಗಳು ತೆರೆದಿವೆ. ಶಾಲಾ ಕಾಲೇಜುಗಳು ಕೂಡ ನಡೆಯುತ್ತಿದ್ದು, ಜನರಿಗೆ ಬಂದ್‌ನ ಅರಿವೇ ಇಲ್ಲದಂತೆ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

https://5ad49b42938d69c955338a95b0ed2d34.safeframe.googlesyndication.com/safeframe/1-0-40/html/container.html


ಮಂಗಳೂರಿನಲ್ಲಿ ಯಥಾವತ್ತಾಗಿ ಜನಜೀವನ ಸರಾಗವಾಗಿ ನಡೆಯುತ್ತಿದ್ದು, ಮಂಗಳೂರು ನಗರದಲ್ಲಿ ವಾಹನಗಳ ದಟ್ಟಣೆಯಿಂದ ಟ್ರಾಪಿಕ್ ಜಾಂ ಕೂಡ ಉಂಟಾಗಿದೆ. ಆಟೋ ರಿಕ್ಷಾ,ಸಿಟಿ ಬಸ್‌ಗಳು ಎಂದಿನಂತೆ ಕಾರ್ಯಾರಂಭ ನಡೆಸಿದ್ದು, ಬಸ್‌ ತುಂಬಾ ಜನರು ಸಂಚರಿಸುತ್ತಿದ್ದಾರೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಕಾವೇರಿ ನೀರಿಗಾಗಿ ಕನಿಷ್ಠ ಪಕ್ಷ ಸಾಂಕೇತಿಕ ಪ್ರತಿಭಟನೆಯೂ ನಡೆದಿಲ್ಲ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಎಂದಿನಂತೆ ಸೇವೆ ಮಾಡುತ್ತಿದ್ದು, ಮಂಗಳೂರಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಆರಂಭಿಸಿವೆ. ಇನ್ನೊಂದೆಡೆ ಬಸ್‌ಗಳಿದ್ದರೂ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ಹೊರಭಾಗಕ್ಕೆ ಹೋಗಲು ಜನರ ಹಿಂದೇಟು ಹಾಕಿದ್ದು, ಮಂಗಳೂರು ಬಸ್ ನಿಲ್ದಾಣದಿಂದ ರಾಜ್ಯದ ವಿವಿಧ ಕಡೆ ಹೋಗುವ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಇನ್ನು ಕೆಲವು ಪ್ರಯಾಣಿಕರು ತಮ್ಮ ಬುಕ್ಕಿಂಗ್‌ನ್ನು ಕ್ಯಾನ್ಸಲ್ ಮಾಡಿದ್ದಾರೆ.


ದಕ್ಷಿಣ ಕನ್ನಡದಂತೆ ಉಡುಪಿ ಜಿಲ್ಲೆ ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಉಡುಪಿ ಜಿಲ್ಲೆಯಲ್ಲಿ ಎಂದಿನಂತೆ ಜನ ಸಂಚಾರ ನಡೆಯುತ್ತಿದ್ದು, ವ್ಯಾಪಾರ ವಹಿವಾಟು ಎಂದಿನಂತೆ ಆರಂಭಗೊಂಡಿದೆ. ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ಓಡಾಟ ನಡೆಸುತ್ತಿದ್ದು, ಶಾಲೆ ಕಾಲೇಜುಗಳು ಓಪನ್ ಆಗಿ ಪರೀಕ್ಷಾ ಪ್ರಕ್ರಿಯೆಗಳು ಆರಂಭಗೊಂಡಿದೆ.

Leave a comment

Your email address will not be published. Required fields are marked *