ಶೆಟ್ಟರ್ ಬಿಜೆಪಿ ಸೇರ್ಪಡೆಗೆ ಡಿಕೆಶಿ ಕಿಡಿ
ನವದೆಹಲಿ:
ರಾಜ್ಯ ರಾಜಕೀಯದ ಹಿರಿಯ ನಾಯಕ, ಮಾಜಿ ಸಿಎಂ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರು ಪುನಃ ಬಿಜೆಪಿಗೆ ಮರಳಿದ್ದಾರೆ. ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಳಿಕ ಬಿಜೆಪಿಗೆ ವಾಪಸ್ ಆಗುವ ನಿರ್ಧಾರ ಪ್ರಕಟಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆಯುವ ನಿರ್ಧಾರವನ್ನು ಪ್ರಕಟಿಸಿದರು.
ಜಗದೀಶ್ ಶೆಟ್ಟರ್ ಏಳೇ ತಿಂಗಳಲ್ಲಿ ಕಾಂಗ್ರೆಸ್ಗೆ ಕೈಕೊಟ್ಟು ಪುನಃ ಬಿಜೆಪಿಗೆ ಮರಳಿದ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್, ನಾನು ಈಗ ಮಾತಾಡೋದಿಲ್ಲ. ಎಲ್ಲ ವಿಷಯ ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇನೆ. ಜಗದೀಶ್ ಶೆಟ್ಟರ್ ರಾಜೀನಾಮೆ ಪತ್ರ ಇನ್ನೂ ನನ್ನ ಕೈಗೆ ತಲುಪಿಲ್ಲ. ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಗೌರವಯುತವಾಗಿ ನಡೆಸಿಕೊಂಡಿತ್ತು. ಕಾಂಗ್ರೆಸ್ಗೆ ದ್ರೋಹ ಮಾಡೋದಿಲ್ಲ ಎಂದು ಹೇಳಿದ್ದರು. ಎಲ್ಲರಿಗೂ ಆತ್ಮಸಾಕ್ಷಿ ಅನ್ನೋದು ಬೇಕು ಎಂದು ಕಿಡಿಕಾರಿದರು.
೩೫ ಸಾವಿರ ಮತಗಳಿಂದ ಸೋತಾಗಲೂ ಶೆಟ್ಟರ್ ಹಿರಿಯರು ಎಂದು ಕಾಂಗ್ರೆಸ್ ಜಗದೀಶ್ ಶೆಟ್ಟರ್ ಅವರನ್ನು ಗೌರವಯುತವಾಗಿ ನಡೆಸಿಕೊಂಡು ಸ್ಥಾನಮಾನ ಕೊಟ್ಟಿತ್ತು ಎಂದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್, ದೇಶದ ಹಿತಕ್ಕಾಗಿ ಬಿಜೆಪಿ ಸೇರ್ಪಡೆ ಆಗ್ತೀನಿ ಅಂತಾ ಹೇಳಿದ್ದಾರೆ. ಕಾಂಗ್ರೆಸ್ಗೆ ಸೇರುವಾಗ ಅವರಿಗೆ ದೇಶದ ಹಿತ ಗೊತ್ತಾಗಿರಲಿಲ್ವಾ? ರಾಜಕಾರಣಿಗಳು ರಾಜಕೀಯ ಮಾಡಬೇಕು. ಆದರೆ ಎಲ್ಲರಿಗೂ ಆತ್ಮಸಾಕ್ಷಿ ಅನ್ನೋದು ಬೇಕು. ನಿನ್ನೆಯತನಕ ಕಾಂಗ್ರೆಸ್ಗೆ ದ್ರೋಹ ಮಾಡೋದಿಲ್ಲ ಎಂದು ಹೇಳಿದ್ದರು ಎಂದರು.
ಮಾಜಿ ಸಿಎಂ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರನ್ನು ಪುನಃ ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿದ ಬಳಿಕ ಮಾತನಾಡಿದ ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ, ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು, ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಮತ್ತು ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಯಾವುದೇ ಅಪೇಕ್ಷೆ ಇಲ್ಲದೆ ವಾಪಸ್ ಬಿಜೆಪಿ ಪಕ್ಷಕ್ಕೆ ಬಂದಿದ್ದಾರೆ. ಇದು ರಾಜ್ಯ ಬಿಜೆಪಿ ನಾಯಕತ್ವಕ್ಕೆ ಮತ್ತು ಬಿಜೆಪಿಯ ಕಾರ್ಯಕರ್ತರಿಗೂ ಸಂತಸ ತಂದಿದೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ, ಜಗದೀಶ್ ಶೆಟ್ಟರ್ ಅವರು ಪುನಃ ಬಿಜೆಪಿಗೆ ಬರಬೇಕು ಅನ್ನೋದು ಭಾರತೀಯ ಜನತಾ ಪಕ್ಷದ ಅಪಾರ ಅಭಿಮಾನಿಗಳ ಅಭಿಲಾಷೆಯಾಗಿತ್ತು. ಅವರು ಬಿಜೆಪಿಗೆ ಪುನಃ ಬಂದರೆ ಪಕ್ಷಕ್ಕೆ ಬಲತುಂಬಿದAತಾಗುತ್ತದೆ ಎಂದು ಅಭಿಮಾನಿಗಳು ಅಪೇಕ್ಷೆ ವ್ಯಕ್ತಪಡಿಸಿದ್ದರು. ಇದೀಗ ಶೆಟ್ಟರ್ ಅವರ ಪುನರಾಗಮನ ಪಕ್ಷದ ಕಾರ್ಯಕರ್ತರಿಗೂ, ನಾಯಕರಿಗೂ ಸಂತಸ ತಂದಿದೆ ಎಂದು ಹೇಳಿದರು.
ಮಾಜಿ ಸಿಎಂ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರು ಇಂದು ದೆಹಲಿಯಲ್ಲಿ ಬಿಜೆಪಿ ಘರ್ ವಾಪ್ಸಿ ಆಗುವ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಅಮಿತ್ ಶಾ ಅವರನ್ನು ಭೇಟಿಯಾದ ಶೆಟ್ಟರ್ ಸುದೀರ್ಘವಾಗಿ ಚರ್ಚೆ ನಡೆಸಿದರು. ಬಿಜೆಪಿ ಸೇರ್ಪಡೆಗೂ ಮುನ್ನ ಜಗದೀಶ್ ಶೆಟ್ಟರ್ ಅವರು, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಮತ್ತು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸೋದಾಗಿ ಹೇಳಿದ್ದಾರೆ.













































































































































































































































































































































































































































































































































































































































































































































































































































































































































































































































































































































