July 29, 2026
#ಬೆಂಗಳೂರು

ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 7 ಗಂಟೆ ವಿದ್ಯುತ್‌ – ಸಿಎಂ ಮಹತ್ವದ ಸಭೆಯಲ್ಲಿ ನಿರ್ಧಾರ


ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಕೃಷಿ ಪಂಪ್ ಸೆಟ್‌ಗಳಿಗೆ ಪ್ರತಿದಿನ 7 ತಾಸು ವಿದ್ಯುತ್ ನೀಡಲು ನಿರ್ಧರಿಸಲಾಗಿತು.

ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ (K.J George), ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಮಳೆ ಅಭಾವದಿಂದ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. 

ಸಭೆಯ ಮುಖ್ಯಾಂಶಗಳು:
2022ಕ್ಕೆ ಹೋಲಿಸಿದ್ರೆ 2023 ರಲ್ಲಿ ವಿದ್ಯುತ್‌ (Electricity) ಬೇಡಿಕೆ ಸರಾಸರಿ ಶೇ.43 ರಷ್ಟು ಹೆಚ್ಚಿದೆ. ಅಕ್ಟೋಬರ್‌ ತಿಂಗಳಲ್ಲಿ 15,978 ಮೆಗಾವ್ಯಾಟ್‌ ಬೇಡಿಕೆ ದಾಖಲಾಗಿದೆ. ವಿದ್ಯುತ್‌ ಬಳಕೆಯಲ್ಲಿ ಕಳೆದ ವರ್ಷಕ್ಕಿಂತ ಶೇ. 45 ರಷ್ಟು ಹೆಚ್ಚಿದೆ. ಕೃಷಿ ಬಳಕೆಯಲ್ಲಿ ಶೇ. 55ರಿಂದ 119 ರಷ್ಟು ಹೆಚ್ಚಳವಾಗಿದೆ. ಇತರ ವಿಭಾಗಗಳಲ್ಲಿ ಶೇ.9 ರಿಂದ 14 ರಷ್ಟು ಹೆಚ್ಚಳವಾಗಿದೆ. ಮಳೆ ಕೊರತೆ, ವಾಡಿಕೆಗಿಂತ ಮೊದಲೇ ಐಪಿ ಸೆಟ್‌ ಗಳ ಬಳಕೆ ಪ್ರಾರಂಭವಾಗಿರುವುದು ಹಾಗೂ ಕೋವಿಡ್‌ 19ರ ನಂತರದ ಆರ್ಥಿಕ ಪುನಶ್ಚೇತನ ಇದಕ್ಕೆ ಕಾರಣವಾಗಿದೆ.

ಕಳೆದ ಬಾರಿ ಪ್ರಗತಿ ಪರಿಶೀಲನೆಯ ನಂತರ ರಾಯಚೂರು, ಬಳ್ಳಾರಿ ಉಷ್ಣವಿದ್ಯುತ್‌ ಸ್ಥಾವರಗಳ ಉತ್ಪಾದನೆ ಹೆಚ್ಚಾಗಿದೆ. ಉತ್ತರ ಪ್ರದೇಶ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶಗಳಿಂದ ವಿದ್ಯುತ್‌ ಪಡೆಯಲಾಗುತ್ತಿದೆ. ಸೆಕ್ಷನ್‌-11 ಅಡಿ ಬೇರೆ ರಾಜ್ಯಗಳಿಗೆ ವಿದ್ಯುತ್‌ ನೀಡದಂತೆ ಆದೇಶ ಹೊರಡಿಸಿ, ವಿದ್ಯುತ್‌ ಪಡೆಯಲಾಗುತ್ತಿದೆ. ಆ ಮೂಲಕ ವಿದ್ಯುತ್‌ ವಿತರಣೆ ಸಹಜ ಸ್ಥಿತಿಗೆ ಬಂದಿದೆ. ನೋಡಲ್‌ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. 

ವಿವಿಧ ವಿದ್ಯುತ್‌ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ರೈತರ ಅಗತ್ಯತೆಗನುಗುಣವಾಗಿ ಐದರಿಂದ ಏಳು ಗಂಟೆಗಳ ಅವಧಿಗೆ ನಿರಂತರ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಐಪಿ ಸೆಟ್‌ಗಳಿಗೆ ನಿರಂತರ 7 ಗಂಟೆಗಳ ಅವಧಿಗೆ ವಿದ್ಯುತ್‌ ಒದಗಿಸಲು 600 ಮೆಗಾವ್ಯಾಟ್‌/ಗಂಟೆ ಹಾಗೂ ಪ್ರತಿದಿನಕ್ಕೆ 14 ಮಿಲಿಯನ್‌ ಯುನಿಟ್‌ಗಳ ಅಗತ್ಯವಿದೆ. 

ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಪ್ರತಿದಿನ 7 ತಾಸು ವಿದ್ಯುತ್‌ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸುಮಾರು 1500 ಕೋಟಿ ರೂ. ಅಗತ್ಯವಿದೆ. ಅನುದಾನದ ಉಳಿತಾಯ, ಮರುಹಂಚಿಕೆಯ ಮೂಲಕ ಈ ವೆಚ್ಚ ಭರಿಸಲಾಗುವುದು. ಮುಂದಿನ ವರ್ಷದಲ್ಲಿ ಐಪಿ ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯನ್ನು ಸೌರವಿದ್ಯುತ್‌ ಮೂಲದಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. (Solarisation of EIP Feeders). ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ವೇಳೆಗೆ ಹಗಲು ವೇಳೆಯಲ್ಲಿಯೇ ರೈತರಿಗೆ ವಿದ್ಯುತ್‌ ನೀಡಲು ಇದರಿಂದ ಅನುಕೂಲವಾಗಲಿದೆ ಎಂದು ಚರ್ಚಿಸಲಾಯಿತು.

Leave a comment

Your email address will not be published. Required fields are marked *