July 28, 2026
#Uncategorized

ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಸ್ಯಾಂಡಲ್ ವುಡ್ 

ಲವು ದಿನಗಳಿಂದ ಮಂಡ್ಯ ಭಾಗದ ರೈತರು ಕಾವೇರಿ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ರೈತರು, ರೈತ ಸಂಘಗಳು ಮತ್ತು ಕನ್ನಡಪರ ಹೋರಾಟಗಾರು ಈ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದರೂ, ಕನ್ನಡ ಸಿನಿಮಾ ರಂಗದವರು ಮಾತ್ರ ಮೌನವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇವತ್ತು ಹಲವು ಕಡೆ ಚಿತ್ರರಂಗದವರ ವಿರುದ್ಧ ಪ್ರತಿಭಟನೆ ಕೂಡ ಮಾಡಿದ್ದರು. ವಿರೋಧದ ಹೋರಾಟ ಹೆಚ್ಚಾಗುತ್ತಿದ್ದಂತೆಯೇ ಒಬ್ಬೊಬ್ಬ ನಟರು ಸೋಷಿಯಲ್ ಮೀಡಿಯಾ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

ಹಿರಿಯ ನಟಿ, ಮಂಡ್ಯ ಕ್ಷೇತ್ರದ ಸಂಸದೆಯೂ ಆಗಿರುವ ಸುಮಲತಾ ಅಂಬರೀಶ್ ಅವರು ನಿರಂತರವಾಗಿ ರೈತರ ಹೋರಾಟಗಳಿಗೆ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ. ಜಲಶಕ್ತಿ ಸಚಿವರನ್ನು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನಿನ್ನೆಯಷ್ಟೇ ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೇ, ನೇರವಾಗಿ ಅವರು ಹೋರಾಟಕ್ಕೂ ಇಳಿದಿದ್ದರು. ಇವರ ಹೊರತಾಗಿ ಬೇರೆ ಯಾವ ಕಲಾವಿದರೂ ಹೋರಾಟದಲ್ಲಿ ಭಾಗಿಯಾಗಿಲ್ಲ ಎನ್ನುವ ಅಸಮಾಧಾನ ಹೋರಾಟಗಾರರಲ್ಲಿ ಇತ್ತು.

ಬೆಳಗ್ಗೆ ನಟ ದರ್ಶನ್ ಟ್ವೀಟ್ ಮಾಡಿ, ‘ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ, ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ’ ಎಂದು ಬರೆದಿದ್ದರು. 

ಕೆಲ ಗಂಟೆಗಳು ಹಿಂದೆ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ‘ಸ್ನೇಹಿತರೆ, ನಮ್ಮ ಕಾವೇರಿ ನಮ್ಮ ಹಕ್ಕು. ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು  ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ’ ಎಂದು ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

ಮೈಸೂರಿನ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಘವೇಂದ್ರ ರಾಜ್ ಕುಮಾರ್ ‘ನಮ್ಮ ಕುಟುಂಬ ಮತ್ತು ಚಿತ್ರರಂಗಕ್ಕೆ ನಾಡು ನುಡಿಯ ವಿಚಾರದಲ್ಲಿ ಹೋರಾಟಕ್ಕೆ ಯಾವಾಗಲೂ ಮುಂದು. ಫಿಲ್ಮ್ ಚೇಂಬರ್ ಕರೆಗಾಗಿ ನಾವು ಕಾಯುತ್ತಿದ್ದೇವೆ. ಹೋರಾಟದಲ್ಲಿ ಹಿಂದೆ ಸರಿಯುವ ಪ್ರಶ್ನೆಯೂ ಇಲ್ಲವೆಂದು’ ಹೇಳಿದ್ದರು.

Leave a comment

Your email address will not be published. Required fields are marked *