ಅಂಧ ಭಕ್ತರು ಹೆಚ್ಚಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಹುನ್ನಾರ
ನವದೆಹಲಿ: ಅಂಧ ಭಕ್ತರು ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ದಕ್ಷಿಣ ಭಾರತದವರು ಅಂಧ ಭಕ್ತರು ಅಲ್ಲ ಎನ್ನುವ ಕಾರಣಕ್ಕೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಡಿ.ಕೆ ಸುರೇಶ್ ಹೇಳಿಕೆ ಬಹಳಷ್ಟು ಚರ್ಚೆಯಾಗುತ್ತಿದೆ. ತೆರಿಗೆ ರೂಪದಲ್ಲಿ ಬರುವ ಹಣ ಹೇಗೆ ವಿಕೇಂದ್ರಿಕರಣಗೊಳ್ಳಬೇಕು ಎಂದು ಫೈನಾನ್ಸ್ ಕಮಿಷನ್ ನಿರ್ಧರಿಸುತ್ತದೆ. ಈಶಾನ್ಯ ರಾಜ್ಯಗಳಿಗೆ ಅನುದಾನದ ಕೊರತೆ ಇದೆ. ಅವರಿಗೆ ಆರ್ಥಿಕ ಸಹಾಯ ಮಾಡುವುದು ನ್ಯಾಯ ಆದರೆ ಉತ್ತರ ಭಾರತದ ಕೆಲವು ರಾಜ್ಯಗಳು ರೋಗಗ್ರಸ್ಥ ರಾಜ್ಯಗಳು ಉತ್ಪಾದನೆ, ಉದ್ಯೋಗ ಸೃಷ್ಟಿ ಮಾಡಿದ್ದರೆ ಈ ರೀತಿಯ ಸಮಸ್ಯೆ ಬರುತ್ತಿರಲಿಲ್ಲ. ಈ ವಿಚಾರದ ಬಗ್ಗೆ ಸುರೇಶ್ ಮಾತನಾಡಿದ್ದಾರೆ. ಅದನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಲು ಬರುತ್ತಿದ್ದಾರೆ. ಭಾರತದಲ್ಲಿ ಗುಜರಾತ್ ಒಂದು ರಾಜ್ಯ. ಆದರೆ ಭಾರತ ಎಂದರೆ ಗುಜರಾತ್ (Gujarat) ಅನ್ನೋ ಹಾಗಿದೆ. ದೇಶದಲ್ಲೇ ಗುಜರಾತ್‌ಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ. ಕ್ರಿಕೆಟ್‌ನಿಂದ ಹಿಡಿದು ಕಡ್ಲೆಕಾಯಿ ಮಾರುವ ವಿಚಾರದಲ್ಲೂ ಗುಜರಾತ್‌ಗೆ ಆದ್ಯತೆ ನೀಡಿದರೆ ಬಾಕಿ ರಾಜ್ಯಗಳು ದನ ಮೇಯಿಸಲು ಬಂದಿದೆಯಾ? ಗುಜರಾತ್ ಮಾಡೆಲ್ ಅಂದ್ರೆ ಪಂಗನಾಮ ಹಾಕುವುದು ಅಲ್ಲಿರುವ ಬಹುತೇಕ ಉದ್ಯಮಿಗಳು ದೇಶಕ್ಕೆ ನಾಮ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಮಮಂದಿರ ಧಾರ್ಮಿಕ ಕಾರ್ಯಕ್ರಮ ಅಲ್ಲ, ರಾಜಕೀಯ ಕಾರ್ಯಕ್ರಮ. ಕೋಟ್ಯಂತರ ರೂ. ಖರ್ಚು ಮಾಡಿ ಮೋದಿ ಮತ್ತು ದೇವಸ್ಥಾನ ತೋರಿಸಿದರು. ಬಡತನ ಸಮಸ್ಯೆ, ಮಣಿಪುರ ಸಂಘರ್ಷ, ಅತ್ಯಾಚಾರ ಯಾವುದನ್ನು ತೋರಿಸಲಿಲ್ಲ. ಜನರ ತೆರಿಗೆ ದುಡ್ಡನ್ನು ತೋರ್ಪಡಿಕೆಗೆ ಖರ್ಚು ಮಾಡಿದೆ. ಮತ ಬ್ಯಾಂಕ್ ಧ್ರುವೀಕರಣ ಮಾಡಲು ಮಾಡಿದ ರಾಜಕೀಯ ಕಾರ್ಯಕ್ರಮ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.











































































































































































































































































































































































































































































































































































































































































































































































































































































































































































































































































































































