November 8, 2025
#ಜಿಲ್ಲೆ

3 ಡಿಸಿಎಂ ಬಗ್ಗೆ ಕುಮಾರಸ್ವಾಮಿ ಲೇವಡಿ

ಚಿಕ್ಕಮಗಳೂರು:
ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ಬಗ್ಗೆ ಚರ್ಚೆ ವಿಚಾರವಾಗಿ ವ್ಯಂಗ್ಯವಾಡಿರುವ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ, ಕಾಂಗ್ರೆಸ್ ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ ಎಂದು ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಜಾತಿಗೊಂದು ಡಿಸಿಎಂ ಸ್ಥಾನ ಕೊಟ್ಟುಬಿಡಿ. 30-35 ಶಾಸಕರಿಗೆ ಡಿಸಿಎಂ ಸ್ಥಾನ ಕೊಡುವುದು ಒಳ್ಳೆಯದು. ಆಗ ಪ್ರತಿನಿತ್ಯ ಡಿಸಿಎಂ ಸ್ಥಾನದ ಬೇಡಿಕೆ ಬಗ್ಗೆ ಗೊಂದಲ ಇರಲ್ಲ ಎಂದು ಲೇವಡಿ ಮಾಡಿದ್ದಾರೆ.
ಈಗ ಗ್ಯಾರಂಟಿ ನೋಡಿಕೊಳ್ಳೋದಕ್ಕೆ ಓರ್ವ ಅಧ್ಯಕ್ಷ ನೇಮಕ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 16 ಕೋಟಿ ಹಣ ಬೇಕಂತೆ. ಗ್ಯಾರಂಟಿ ಯೋಜನೆಗೆ ಐವರು ಉಪಾಧ್ಯಕ್ಷರು ಯಾಕೆ ಬೇಕು? ಕಾಂಗ್ರೆಸ್ ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಕಾಂಗ್ರೆಸ್‌ನ ಸದ್ಯದ ಪರಿಸ್ಥಿತಿ ನನಗೆ ಅರ್ಥವಾಗಿದೆ. ಚುನಾವಣೆ ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಯುವನಿಧಿ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಯುವನಿಧಿ ಯೋಜನೆ ಕಾರ್ಯಕ್ರಮದಲ್ಲಿ ಏನಿದೆ? ಯುವನಿಧಿ ಯೋಜನೆಗೆ ಎಷ್ಟು ಜನ ನೋಂದಣಿ ಮಾಡಿಸಿದ್ದಾರೆ?2023-24 ಎಷ್ಟು ಜನ ಪದವಿ ಪಡೆದಿದ್ದಾರೆ, ಅವರ ಗೈಡ್‌ಲೈನ್ಸ್ನಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಮಂಡ್ಯದಲ್ಲಿ ನಮ್ಮ ಸಾಮಾನ್ಯ ಕಾರ್ಯಕರ್ತ ಕೂಡ ಗೆಲ್ಲುತ್ತಾನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕಳೆದ ಬಾರಿಯ ಲೋಕಸಭೆ ಚುನಾವಣೆ ಬೇರೆ, ಈ ಚುನಾವಣೆ ಬೇರೆ. ಇವತ್ತು ಓರ್ವ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿದರೂ ಗೆಲ್ಲಲಿದ್ದಾರೆ. ಕಳೆದ ಬಾರಿ ಎಲ್ಲರೂ ಪಕ್ಷೇತರ ಅಭ್ಯರ್ಥಿಯ ಪರ ಮತ ಹಾಕಿದರು. ರೈತರು, ಬಿಜೆಪಿ, ಕಾಂಗ್ರೆಸ್ಸಿಗರು ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದರು. ಜೆಡಿಎಸ್ ಬಿಟ್ಟು ಶೇ.೨ರಿಂದ ೩ ರಷ್ಟು ಮತದಾರರು ಮಾತ್ರ ನಮ್ಮ ಪರ ಇದ್ದರು. ಈಗ ಮಂಡ್ಯ ಕ್ಷೇತ್ರದಲ್ಲಿ ಆ ವಾತಾವರಣ ಇಲ್ಲ ಎಂದು ಅವರು ಹೇಳಿದ್ದಾರೆ.
ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಯಾಕೆ ಹೋಗಲ್ಲ ಅಂತಾ ಕಾಂಗ್ರೆಸ್ಸಿಗರೇ ಹೇಳಬೇಕು. ಕಾಂಗ್ರೆಸ್‌ನವರ ತೀರ್ಮಾನಕ್ಕೂ ನನಗೂ ಸಂಬAಧವಿಲ್ಲ. ರಾಮಮಂದಿರ ಆಗಬೇಕು ಅನ್ನೋದು ದೇಶದ ಜನರ ನಿರೀಕ್ಷೆ. ಹಲವು ವರ್ಷಗಳ ಗೊಂದಲಕ್ಕೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ. ರಾಮ ಮಂದಿರ ನಿಜವಾದ ರಾಮ ರಾಜ್ಯದ ಕನಸು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Leave a comment

Your email address will not be published. Required fields are marked *