November 8, 2025
#ಜಿಲ್ಲೆ

ರಾಮಮಂದಿರಕ್ಕೂ, ಭಕ್ತರಿಗೂ ರಕ್ಷಣೆ ಬೇಕು: ಡಿ.ಕೆ.ಸುರೇಶ್

ರಾಮನಗರ:
ಗೋಧ್ರಾ ಮಾದರಿ ಮತ್ತೊಂದು ದುರಂತ ಸಂಭವಿಸಬಹುದು ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆಯನ್ನ ಸಂಸದ ಡಿ.ಕೆ.ಸುರೇಶ್ ಸಮರ್ಥಿಸಿಕೊಂಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತು ಅಯೋಧ್ಯೆ ವಿವಾದಾತ್ಮಕ ಕ್ಷೇತ್ರ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆಗಿದೆ. ರಾಮಮಂದಿರಕ್ಕೂ ರಕ್ಷಣೆ ಬೇಕು, ಭಕ್ತರಿಗೂ ರಕ್ಷಣೆ ಕೊಡಬೇಕು. ಏನೇ ಇದ್ರೂ ರಕ್ಷಣೆ ಕೊಡುವುದು ಸರ್ಕಾರದ ಕರ್ತವ್ಯ. ಆ ದೃಷ್ಟಿಯಿಂದ ಹರಿಪ್ರಸಾದ್ ಅವರು ಹೇಳಿದ್ದಾರೆ ಎಂದು ತಿಳಿಸಿದರು.
ಕರಸೇವಕರ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ ವಿಚಾರ ಕುರಿತು ಮಾತನಾಡಿ, ಯಾರನ್ನೂ ಉದ್ದೇಶಪೂರ್ವಕವಾಗಿ ಬಂಧನ ಮಾಡಿಲ್ಲ. ಸರ್ಕಾರ ಕೆಲ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಕೆಲ ದುರ್ಘಟನೆ ನಡೆಯಬಹುದು ಎಂಬ ಗುಮಾನಿ ಮೇಲೆ ಬಂಧನ ಮಾಡಲಾಗಿದೆ. ಇದು ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಮಾಡಿರುವ ಕ್ರಮ. ಇದರಲ್ಲಿ ರಾಜಕೀಯ ಇಲ್ಲ ಎಂದರು.
ಅಲ್ಲದೇ ಲೋಕಸಭಾ ಚುನಾವಣೆ ದೃಷ್ಟಿಯಿಂದ ರಾಮಮಂದಿರ ಉದ್ಘಾಟನೆ ಆಗ್ತಿದ್ಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಮಮಂದಿರ ನಿರ್ಮಾಣ ಭಾರತೀಯರ ಆಸೆ. ಒಬ್ಬರು ಒಂದು ಕಡೆ ರಾಮಮಂದಿರ ನಿರ್ಮಾಣ ಮಾಡಬೇಕು ಅಂತ. ಮತ್ತೊಬ್ಬರು ದೇಶದಲ್ಲೆಲ್ಲ ರಾಮಮಂದಿರ ನಿರ್ಮಾಣ ಮಾಡಬೇಕು ಅಂತ. ಹಳ್ಳಿ ಹಳ್ಳಿಗಳಲ್ಲೂ ರಾಮಮಂದಿರ ಆಗಬೇಕು ಅನ್ನೋದು ನಮ್ಮ ಉದ್ದೇಶ. ಆದರೆ ಕೆಲವರು ಪ್ರಚಾರಕ್ಕೆ ಒಂದನ್ನ ಬಳಸಿಕೊಳ್ತಾರೆ. ರಾಮಮಂದಿರ ಉದ್ಘಾಟನೆಗೆ ನನಗೆ ಆಹ್ವಾನ ಬಂದಿಲ್ಲ. ಆಹ್ವಾನ ಬಂದ್ರೆ ನೋಡೋಣ ಎಂದು ತಿಳಿಸಿದರು.
ಗೋಧ್ರಾ ದುರಂತ ರೀತಿ ಮತ್ತೊಮ್ಮೆ ಏನಾದರು ಆಗಬಹುದು. ರಾಮಮಂದಿರಕ್ಕೆ ಹೋಗುವವರಿಗೆ ಸರ್ಕಾರ ರಕ್ಷಣೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಕಿಡಿಕಾರಿದೆ. ಹರಿಪ್ರಸಾದ್ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ.

Leave a comment

Your email address will not be published. Required fields are marked *