‘ಕಾಟೇರ’ ಮೂಲಕ ಸಿನಿಮಾ ವಿತರಣಾ ಕ್ಷೇತ್ರಕ್ಕೆ ಮರಳಿದ ಗುರು ದೇಶಪಾಂಡೆ
ಕರ್ನಾಟಕದ ತುಂಬೆಲ್ಲ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಕಾಟೇರ’ ಕ್ರೇಜ್ ಮೇರೆ ಮೀರಿಕೊಂಡಿದೆ. ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆದು ಥೇಟರುಗಳಿಗೆ ಆಗಮಿಸುವ ಸನ್ನಾಹದಲ್ಲಿರೋ ಈ ಚಿತ್ರದ ದಿಕ್ಕಿನಿಂದ ಕ್ಷಣಕ್ಕೊಂದರಂತೆ ಹೊಸಾ ಸುದ್ದಿಗಳು ಹೊರಬೀಳುತ್ತಿವೆ. ಇದೇ ಹೊತ್ತಿನಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಕಾಟೇರ ವಿತರಣಾ ಹಕ್ಕನ್ನು ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಪಡೆದುಕೊಂಡಿದ್ದಾರೆ.
ಈ ಸುದ್ದಿ ಕೇಳಿದಾಕ್ಷಣ ಹಲವರಿಗೆ ಅಚ್ಚರಿಯಾದೀತೇನೋ… ಗುರು ದೇಶಪಾಂಡೆ ನಿರ್ದೇಶಕರಾಗಿ ಪ್ರಸಿದ್ಧಿ ಪಡೆದುಕೊಂಡಿರುವವರು. ಇತ್ತೀಚಿನ ದಿನಗಳಲ್ಲಿ ನಿರ್ಮಾಪಕರಾಗಿಯೂ ಸದ್ದು ಮಾಡುತ್ತಿರುವವರು. ಇಂಥಾ ಗುರು ದೇಶಪಾಂಡೆ ಏಕಾಏಕಿ ಸಿನಿಮಾ ವಿತರಣಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರೆಂದರೆ, ಅಚ್ಚರಿಯಾಗೋದು ಸಹಜವೇ. ಅಸಲೀ ವಿಚಾರವೆಂದರೆ, ಅವರು ಸಿನಿಮಾ ವಿತರಣಾ ಕ್ಷೇತ್ರಕ್ಕೆ ಸೀನಿಯರ್. ದಶಕಗಳ ಹಿಂದೆ ಹಲವಾರು ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿದ್ದ ಗುರು ದೇಶಪಾಂಡೆ ಕಾಟೇರ ಮೂಲಕ ಆ ಕ್ಷೇತ್ರಕ್ಕೆ ಮತ್ತೆ ಅಡಿಯಿರಿಸಿದ್ದಾರೆ.
ದರ್ಶನ್ ಸಿನಿಮಾಗಳೆಂದರೆ, ದಶದಿಕ್ಕುಗಳತ್ತಲೂ ಕ್ರೇಜ್ ಹಬ್ಬಿಕೊಳ್ಳೋದು ಮಾಮೂಲು. ಸದ್ಯದ ಮಟ್ಟಿಗೆ ಕಾಟೇರ ವಿಚಾರದಲ್ಲಿ ಈ ಹಿಂದಿಗಿಂತಲೂ ತುಸು ಹೆಚ್ಚೇ ನಿರೀಕ್ಷೆಗಳಿದ್ದಾವೆ. ಅದರಲ್ಲಿಯೂ ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕ ಮಂದಿಯ ಸಿನಿಮಾ ವ್ಯಾಮೋಹ ಅತೀವವಾದದ್ದು. ಇಂಥಾ ಭಾಗದ ಕಾಟೇರ ವಿತರಣಾ ಹಕ್ಕು ಗುರು ದೇಶಪಾಂಡೆ ತೆಕ್ಕೆಗೆ ಬಿದ್ದಿದೆ. ಇದರೊಂದಿಗೆ ಸಿನಿಮಾ ವಿತರಕರಾಗಿ ಗುರು ದೇಶಪಾಡೆ ಅವರ ಸೆಕೆಂಡ್ ಇನ್ನಿಂಗ್ಸ್ ಕೂಡಾ ಭರ್ಜರಿ ಯಶ ದಕ್ಕಿಸಿಕೊಳ್ಳುವ ನಿಖರ ಸೂಚನೆಗಳೂ ಕಾಣಿಸುತ್ತಿವೆ.
ಗುರು ದೇಶಪಾಂಡೆ ಸಿನಿಮಾ ರಂಗದ ನಾನಾ ವಿಭಾಗಗಳಲ್ಲಿ ಸಕ್ರಿಯರಾಗಿದ್ದರೂ ಕೂಡಾ, ಪ್ರಧಾನವಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, 2010-11ನೇ ಸಾಲಿನಲ್ಲಿ ಅವರು ಸಿನಿಮಾ ವಿತರಕರಾಗಿ ಸಕ್ರಿಯರಾಗಿದ್ದರು. ಆ ಕಾಲದಲ್ಲಿ ರಜನೀಕಾಂತ್ ಮಾಜೀ ಅಳಿಯ ಧನುಶ್ ನಟಿಸಿದ್ದ ಅಡುಗಳಂ, ದೈವ ತಿರುಮಗಳ್, ದಳಪತಿ ವಿಜಯ್ ನಟಿಸಿದ್ದ ವೇಲಾಯುಧನ್, ಯಶ್ ಅಭಿನಯದ ಕಿರಾತಕ, ಸಂಜು ವೆಡ್ಸ್ ಗೀತಾದಂಥಾ ಹಿಟ್ ಸಿನಿಮಾಗಳನ್ನು ವಿತರಿಸುವ ಮೂಲಕ ಗೆದ್ದಿದ್ದರು. ಆ ನಂತರದಲ್ಲಿ ನಿರ್ದೇಶನದತ್ತ ಹೊರಳಿಕೊಂಡಿದ್ದ ಗುರು ದೇಶಪಾಂಡೆ ವಿತರಣಾ ಕ್ಷೇತ್ರದಿಂದ ಹಿಂದೆ ಸರಿದ್ದರು. ಇದೀಗ ದಶಕದ ನಂತರ, ಕಾಟೇರನ ಪ್ರಭೆಯಲ್ಲವರು ಹಳೇ ಹಾದಿಯಲ್ಲಿ ಹೊಸಾ ಹುರುಪಿನೊಂದಿಗೆ ಹೆಜ್ಜೆಯೂರಿದ್ದಾರೆ













































































































































































































































































































































































































































































































































































































































































































































































































































































































































































































































































































































