ಕಾಕನ ಕೋಟೆಯ ಭೀಮ – ಶೌರ್ಯ ಸಾಹಸಕ್ಕೆ ನಿಸ್ಸೀಮ
ಮೈಸೂರು/ಬೆಂಗಳೂರು: ಮೈಸೂರು ದಸರಾ ಮಹೋತ್ಸವದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನನ (Arjuna Elephant) ಹಠಾತ್ ನಿಧನಕ್ಕೆ ನಾಡಿನ ಜನರು ಕಂಬನಿ ಮಿಡಿದಿದ್ದಾರೆ. ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರ್ಜುನ ತನ್ನೊಂದಿಗೆ ತೆರಳಿದ್ದ ಹಲವರ ಜೀವ ಉಳಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಶೌರ್ಯ, ಸಾಹಸಕ್ಕೆ ಹೆಸರು ವಾಸಿಯಾಗಿದ್ದ ಅರ್ಜುನ, ಸಾಯುವ ಕೊನೇ ಕ್ಷಣದಲ್ಲೂ ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿರುವುದು ಸುಳ್ಳಲ್ಲ.
2012 ರಿಂದ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನ 8 ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ. ಆದ್ರೆ ಅರ್ಜುನನ ವಯಸ್ಸು 60 ವರ್ಷ ದಾಟಿದ ನಂತರ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯುವಿಗೆ ಬಿಟ್ಟುಕೊಟ್ಟು ನಂತರ ನಿಶಾನಿ ಆನೆಯಾಗಿ ಗಜಪಡೆಯನ್ನು ಮುನ್ನಡೆಸಲು ಮುಂದಾಯಿತು.
ಬಲದಲ್ಲಿ ಭೀಮ – ಸಾಹಸಕ್ಕೆ ನಿಸ್ಸೀಮ:
1968ರಲ್ಲಿ ಕಾಕನ ಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದಾಗ ಅರ್ಜುನನಿಗೆ ಇನ್ನೂ 10 ವರ್ಷವೂ ದಾಟಿರಲಿಲ್ಲ. ಆರಂಭದಲ್ಲಿ ಉಗ್ರ ಕೋಪಕ್ಕೆ ಹೆಸರು ವಾಸಿಯಾಗಿದ್ದ ಅರ್ಜುನ ನಂತರ ಮಾವುತರು, ಕವಾಡಿಗಳ ಜೊತೆ ಹೊಂದಿಕೊಂಡು ಶೌರ್ಯ ಸಾಹಸಕ್ಕೂ ಹೆಸರುವಾಸಿಯಾಯಿತು. 2010ರಲ್ಲಿ 4,541 ಕೆಜಿ ತೂಕವಿದ್ದ ಅರ್ಜುನ 2016ರ ದಸರಾ ಜಂಬೂ ಸವಾರಿ ವೇಳೆಗೆ 5,870 ಕೆಜಿಗೆ ಹೆಚ್ಚಿಸಿಕೊಂಡು ಬಲಭೀಮನಾದ. ಆದ್ದರಿಂದಲೇ ಪುಂಡಾನೆ ಸೆರೆ, ಹುಲಿ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನನ್ನು ನಿರಂತರವಾಗಿ ಬಳಸಿಕೊಳ್ಳಲಾಗುತ್ತಿತ್ತು.
90ರ ದಶಕದಲ್ಲಿಯೇ ಅರ್ಜುನ ದಸರಾ ಗಜಪಡೆಯ ಭಾಗವಾಗಿದ್ದ. 1997ರಲ್ಲಿ ದ್ರೋಣ ಆನೆ ವಿದ್ಯುತ್ ಅವಘಡದಿಂದ ಮೃತಪಟ್ಟಾಗ ಅಂಬಾರಿ ಆನೆಯ ಸ್ಥಾನಕ್ಕೆ ಅರ್ಜುನನೇ ಮೊದಲ ಆಯ್ಕೆಯಾಗಿದ್ದ. ಆದ್ರೆ ಅದೇ ಸಂದರ್ಭದಲ್ಲಿ ದಸರೆಗೆ ಬಂದ ಸಂಗಾತಿ ಆನೆಯ ಕವಾಡಿಗನನ್ನು ಬಲಿಪಡೆದ ಕಾರಣಕ್ಕೆ ಒಂದಷ್ಟು ವರ್ಷಗಳವರೆಗೆ ಅರ್ಜುನನನ್ನು ಜಂಬೂಸವಾರಿಯಿಂದಲೇ ಹೊರಗಿಡಲಾಗಿತ್ತು. ಈ ಅವಘಡ ನಡೆಯದೇ ಇದ್ದಿದ್ದರೇ ಅರ್ಜುನ 20 ವರ್ಷಗಳಿಗೂ ಹೆಚ್ಚು ಕಾಲ ಅಂಬಾರಿ ಹೊತ್ತ ಇತಿಹಾಸವಿರುತ್ತಿತ್ತು.
ದಸರಾ ಹೊರತು ಪಡಿಸಿ ಇತರೆ ದಿನಗಳಲ್ಲಿ ಬಳ್ಳೆ ಆನೆ ಶಿಬಿರದಲ್ಲಿ ವಾಸ್ತವ್ಯ ಹೂಡುವ ಅರ್ಜುನ ಎಲ್ಲಿಯೇ ಹುಲಿ ಸೆರೆ, ಪುಂಡಾನೆ ಸೆರೆ ಕಾರ್ಯಾಚರಣೆ ಇರಲಿ ಅಲ್ಲಿಗೆ ರೆಡಿಯಾಗಿರುತ್ತಿದ್ದ. ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿಲ್ಲೂ ಪುಂಡಾನೆಗಳನ್ನ ಸೆರೆಹಿಡಿಯಲು ಬಳಸಿಕೊಂಡಿರುವುದು ಅರ್ಜುನನ ಶೌರ್ಯಕ್ಕೆ ಸಾಕ್ಷಿಯಾಗಿದೆ.
2019ರಲ್ಲಿ ನಾಲ್ಕು ಜನರನ್ನು ತಿಂದಿದ್ದ ಹುಲಿಯನ್ನು ಸೆರೆ ಹಿಡಿಯಲು ಅರ್ಜುನನನ್ನ ಬಳಸಿಕೊಳ್ಳಲಾಗಿತ್ತು. ಅಂದು ಸತತ ಮೂರು ದಿನ ಕಾರ್ಯಾಚರಣೆ ನಡೆಸಿ ಹುಲಿಯ ಹೆಜ್ಜೆಗುರುತುಗಳನ್ನ ಆಧರಿಸಿ ಹುಲಿಯನ್ನು ಸೆರೆಹಿಡಿಯಲಾಗಿತ್ತು. ಇದಕ್ಕೆ ಮೆಚ್ಚಿ ಸರ್ಕಾರ ಅರ್ಜುನ ಮತ್ತು ಮಾವುತ ವಿನುಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿತ್ತು. ಇದೀಗ ಅಂತಹದ್ದೇ ಕಾರ್ಯಾಚರಣೆ ವೇಳೆ ಅರ್ಜುನ ವೀರಣ ಮರಣ ಹೊಂದಿದ್ದಾನೆ.














































































































































































































































































































































































































































































































































































































































































































































































































































































































































































































































































































































