ಹೆಚ್‍ಡಿಕೆ ಮಾಜಿ ಸಿಎಂ ಆಗಿ ಚಿಲ್ಲರೆ ರೀತಿ ಮಾತಾಡ್ತಾರೆ
ರಾಮನಗರ: ಕುಮಾರಸ್ವಾಮಿಯವರು ಮಾಜಿ ಸಿಎಂ ಆಗಿ ಚಿಲ್ಲರೆ ತರ ಮಾತನಾಡ್ತಾರೆ. ಸಿಎಂ, ಡಿಸಿಎಂ ಹಾಗೂ ಸಚಿವರು ಕಳೆದ ಐದು ತಿಂಗಳಿಂದ ಯಾವುದೇ ಹಣ ತಿಂದಿಲ್ಲ ಎಂದು ಆಣೆ ಮಾಡಲಿ ಎಂಬ ಬಾಲಿಶ ಹೇಳಿಕೆ ಕೊಡುತ್ತಾರೆ ಎಂದು ಶಾಸಕ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್‍ಡಿಕೆ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಅವರಿಗೆ ಸರಿಯಾಗಿ ತೂಕವಾಗಿ ಮಾತನಾಡಲು ಹೇಳಿ. ಅವರು ದೇವೇಗೌಡರನ್ನ ಕರೆಸಿ ಆಣೆ ಮಾಡಿಸ್ತಾರಾ ಕೇಳಿ. ದೇವೇಗೌಡರು ದುಡ್ಡು ತಿಂದಿಲ್ಲ ಎಂದು ಬಂದು ಪ್ರಮಾಣ ಮಾಡ್ತಾರಾ? ಅವರ ಕುಟುಂಬದವರು ದುಡ್ಡು ತಿಂದಿಲ್ಲ ಎಂದರೆ ಆಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಎರಡು ಬಾರಿ ಸಿಎಂ ಆದವರು ಸಮಯೋಚಿತವಾಗಿ ಮಾತನಾಡಬೇಕು. ಸರಿ ನಾವೆಲ್ಲರೂ ಕಳ್ಳರೇ ಎಂದು ಒಪ್ಪಿಕೊಳ್ಳುತ್ತೇವೆ. ನಾನು ಸತ್ಯಹರಿಶ್ಚಂದ್ರ, ನಾವೇನು ತಿಂದಿಲ್ಲ ಎಂದು ಕುಮಾರಸ್ವಾಮಿ ಆಣೆ ಮಾಡಲಿ. ಆಣೆ ಮಾಡಲು ಅವರು ಇವರನ್ನು ಕರೆಯುವುದಲ್ಲ. ನೀವು ಮೋದಿ ಕರೆಯಿರಿ ಎಂದರೆ ಕರೆಯೋಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂಬ ಮರುನಾಮಕರಣ ವಿಚಾರವಾಗಿ, ಅಭಿವೃದ್ಧಿಗಾಗಿ ಬದಲಾವಣೆ ಅನಿವಾರ್ಯವಾಗಿದೆ. ಹೆಚ್‍ಡಿಕೆ ಉಪವಾಸ ಮಾಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ.













































































































































































































































































































































































































































































































































































































































































































































































































































































































































































































































































































































