November 8, 2025
#ಜಿಲ್ಲೆ

ರಾಜ್ಯ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿಯಿಲ್ಲ


ಕಲಬುರಗಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸರ್ಕಾರ ತನ್ನ ವಾದ ಮಂಡಿಸಲು ವಿಫಲವಾಗಿದ್ದು, ರಾಜ್ಯ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿಯಿಲ್ಲದಂತಾಗಿದೆ ಎಂದು ಜೆಡಿಎಸ್ (JDS) ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರೇ ಇಲ್ಲದಿದ್ದರೆ ಜನರಿಗೆ ಕುಡಿಯುವ ನೀರು ಸಿಗುತ್ತಾ? ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಲಿಲ್ಲ ಎಂದಾಗ ರಾಜ್ಯ ಸರ್ಕಾರ ಉಳಿಯುತ್ತಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಲಿದೆ ಎಂದು ಮೊದಲೇ ಹವಾಮಾನ ಇಲಾಖೆ ವರದಿ ನೀಡಿದಾಗಲೇ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಹೋಗಬೇಕಿತ್ತು. ಸಂಕಷ್ಟ ಸೂತ್ರ ರೂಪಿಸುವಂತೆ ಮನವಿ ಮಾಡಬೇಕಾಗಿತ್ತು ಎಂದರು. 

ಯಾವುದೇ ಆದೇಶವಿಲ್ಲದಿದ್ದಾಗಲೇ ತಮಿಳುನಾಡು ರಾಜ್ಯಕ್ಕೆ ನೀರು ಬಿಟ್ಟಿದ್ದಾರೆ. ಸ್ಟಾಲಿನ್ ಜೊತೆ ಮಾತನಾಡಿಕೊಂಡು, ಅವರ ಜೊತೆಗೂಡಿ ಇಂಡಿಯಾ ಒಕ್ಕೂಟವನ್ನು ಅಧಿಕಾರಕ್ಕೆ ತರಲು ರಾಜ್ಯ ಸರ್ಕಾರ ನೀರು ಬಿಟ್ಟಿದ್ದಾರೆ. ಅಧಿಕಾರದ ಅಮಲಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತೇಲಾಡುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ವೈರಿಯಾಗಿಯೇ ಇರಬೇಕು ಎಂದು ಕಾಂಗ್ರೆಸ್ ಆಸೆ ಪಟ್ಟಿತ್ತು. ಆದರೆ ಮೈತ್ರಿಯಿಂದ ಇದೀಗ ಇವರಿಗೆ ದೊಡ್ಡ ಆತಂಕ ಎದುರಾಗಿದೆ. ಸಮರ್ಥ ಮುಖ್ಯಮಂತ್ರಿ ಎನಿಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ವಿಫಲ ಮುಖ್ಯಮಂತ್ರಿ ಆಗಿದ್ದಾರೆ ವಾಗ್ದಾಳಿ ನಡೆಸಿದರು. 

ಕಾವೇರಿ ವಿಚಾರವಾಗಿ ಬೆಂಗಳೂರು ಬಂದ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆ ಮಾಡಿದರೂ 144 ಸೆಕ್ಷನ್ ಹಾಕಿದ್ದಾರೆ. ಇದೊಂದು ಅವೈಜ್ಞಾನಿಕ ಸರ್ಕಾರವಾಗಿದೆ. ಹೋರಾಟ ಮಾಡುತ್ತಿರುವ ಕನ್ನಡಿಗರನ್ನೇ ಬಂಧಿಸುತ್ತಿದೆ. ಕಾವೇರಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿಲ್ಲ. ಬಂದು ಮಾತುಕತೆ ಕೂಡ ನಡೆಸಿಲ್ಲ ಎಂದು ಹೇಳಿದರು.

Leave a comment

Your email address will not be published. Required fields are marked *